ಚುನಾವಣಾ ಹೊತ್ತಲ್ಲಿ ದೆಹಲಿ ನಾಯಕರು ಎಂಟ್ರಿ; ಬಿಜೆಪಿ ಸರ್ಕಾರದಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ: ನಿರ್ಮಲಾ ಸೀತಾರಾಮನ್
ಬೆಂಗಳೂರು,ಏಪ್ರಿಲ್6: ಮೋದಿ ಸರ್ಕಾರದ ಅವಧಿಯಲ್ಲಿ ಭಾರತ ಹೆಚ್ಚು ಅಭಿವೃದ್ಧಿಯಾಗಿದೆ. ಇದೇ ರೀತಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಹ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕಸಭೆಗೆ ಒಂದು ವರ್ಷದ ಅಸಾಂವಿಧಾನಿಕ ವಿಸ್ತರಣೆ ಜೊತೆಗೆ ಸಂವಿಧಾನದ ಮೂಲಭೂತ ವಿಷಯಗಳಿಗೆ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದು ಕರ್ನಾಟಕ ಮಾತ್ರವಲ್ಲದೆ ದೇಶದ ಜನತೆಗೆ ಗೊತ್ತಿದೆ. ಬಿಜೆಪಿ ಹುಟ್ಟುವ ಮೊದಲೇ ನಮ್ಮ ನಾಯಕರಿಗೆ ಕರ್ನಾಟಕದ ಜೊತೆ ವಿಶೇಷ ಭಾವನಾತ್ಮಕ ಸಂಬಂಧ ಇದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿನಲ್ಲಿಟ್ಟ ಕಾಂಗ್ರೆಸ್ ಪಕ್ಷದ ಈಗಿನ ನಾಯಕರು ವಿವಿಧ ಸಂಸ್ಥೆಗಳ ದುರ್ಬಳಕೆಯ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕಸಭೆ ಅವಧಿಯನ್ನು ಒಂದು ವರ್ಷ ಅಸಾಂವಿಧಾನಿಕ ರೀತಿಯಲ್ಲಿ ವಿಸ್ತರಣೆ ನೀಡಲಾಗಿತ್ತು. ವಿರೋಧ ಪಕ್ಷಗಳ ಪ್ರಮುಖ ನಾಯಕರು ಜೈಲಿನಲ್ಲಿ ಇರುವಾಗಲೇ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತರಲಾಗಿತ್ತು. ರಾಜ್ಯಸಭೆ, ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ಬೇಕಿದ್ದರೂ ಇದೇ ಅವಧಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು ಎಂದು ಆಕ್ಷೇಪಿಸಿದರು.
ಬಿಜೆಪಿ ಹುಟ್ಟುವ ಮೊದಲೇ ಪಕ್ಷದ ಮುಖಂಡರು ಬೆಂಗಳೂರಿನ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಾಗ ನಮ್ಮ ಇಬ್ಬರು ಪ್ರಮುಖ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರನ್ನು ಇಲ್ಲಿ ಬಂಧಿಸಲಾಗಿತ್ತು ಎಂದು ಅವರು ಹೇಳಿದರು.

ಚುನಾವಣೆ ಘೋಷಣೆ ಆದ ಬಳಿಕ ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಇಲ್ಲಿನವರೆಗೆ 32 ಬಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ. 2023ರಲ್ಲಿ ಈಗಾಗಲೇ 7 ಬಾರಿ ಭೇಟಿ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಮತ್ತೊಮ್ಮೆ ಭೇಟಿ ಕೊಡಲಿದ್ದಾರೆ ಎಂದರು.
ಜಿ 20 ಸಭೆಗಳಲ್ಲಿ ಕೇಂದ್ರ ಬ್ಯಾಂಕ್, ಗವರ್ನರ್‍ಗಳ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಅಲ್ಲಿ ಐಐಟಿಗಳು, ಸ್ಟಾರ್ಟಪ್‍ಗಳ ಪ್ರದರ್ಶಿನಿಯನ್ನೂ ಏರ್ಪಡಿಸಲಾಗಿತ್ತು. ಭಾರತೀಯರ ಸಾಮಥ್ರ್ಯ ಅನಾವರಣಕ್ಕೆ ಇದು ಅವಕಾಶ ಮಾಡಿಕೊಟ್ಟಿತ್ತು. ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು ಎಂದ ಅವರು, ಇಲ್ಲಿನ ವಿಚಾರಗಳಿಗೆ ಅವರು ಆದ್ಯತೆ ನೀಡಿದ್ದನ್ನು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪಕ್ಷದ ಸ್ಥಾಪನಾ ದಿನಾಚರಣೆ
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಪಕ್ಷದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು. ಪುಷ್ಪಾರ್ಚನೆ ಮತ್ತು ಧ್ವಜಾರೋಹಣ ನೆರವೇರಿಸಲಾಯಿತು.
ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಆಲಿಸುವ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications