‘ಸಂವಿಧಾನ ಎಲ್ಲಾ ಜಾತಿ & ಧರ್ಮದವರ ಬದುಕಿನ ರಕ್ಷಣೆಗಾಗಿ ಇರುವ ಪ್ರಮುಖ ಗ್ರಂಥ’
ಬಾಬಾ ಸಾಹೇಬ್ ಆಂಬೇಡ್ಕರ್ ಅವರು ನೀಡಿದ ಸಂವಿಧಾನ ಎಲ್ಲಾ ಜಾತಿ & ಧರ್ಮದವರ ಬದುಕಿನ ರಕ್ಷಣೆಗಾಗಿ ಇರುವ ಪ್ರಮುಖ ಗ್ರಂಥ ಎಂದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು. ಆನೇಕಲ್ ತಾಲೂಕಿನ, ಹೊಸ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ದಿ ಇಲಾಖೆಯ ಸಂಯಕ್ತ ಅಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿರುವ ಹಕ್ಕು ಎಲ್ಲರಿಗೂ ಶಕ್ತಿ ನೀಡುತ್ತಿದ್ದು, ಸರ್ವರಿಗೂ ಸಮಬಾಳ್ವೆ, ಸಮಪಾಲು ಎಂಬಂತೆ ಸಮಾಜದಲ್ಲಿ ಮೇಲು ಕೀಳು ಎಂಬ ಬೇಧ ಭಾವವಿ ಇಲ್ಲದೇ ಎಲ್ಲರೂ ಸಮಾನರು ಎಂಬ ಶಾಂತಿ ತೋಟ ಬೆಳಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಲಹೆಯನ್ನು ನೀಡಿದ್ರು. ಆನೇಕಲ್ ತಾಲೂಕಿನ ಸಮಗ್ರ ಅಭಿವೃದ್ದಿಗೆ ನಾನು ಬದ್ದ. ಈ ಪ್ರದೇಶದಲ್ಲಿ ಜನ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಕಾವೇರಿ ನೀರನ್ನು ತರಲು ಕ್ರಮವಹಿಸಲಾಗುತ್ತಿದೆ. ಸಂಚಾರಕ್ಕಾಗಿ ಮೆಟ್ರೋ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಭರವಸೆ ನೀಡಿದರು ಡಿಸಿಎಂ.

ಇಡೀ ವಿಶ್ವದಲ್ಲೇ ಶ್ರೇಷ್ಠ ಚಿಂತನೆ
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಆನೇಕಲ್ ಶಾಸಕರಾದ ಶಿವಣ್ಣ, ಅಂಬೇಡ್ಕರ್ ಅವರ ಚಿಂತನೆ ಇಡೀ ವಿಶ್ವದಲ್ಲೆ ಶ್ರೇಷ್ಠವಾಗಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂವಿಧಾನ ನಮಗೆ ಅನುಕೂಲವಾಗುವಂತೆ ಹಕ್ಕು & ಕಾನೂನನ್ನು ರೂಪಿಸಿಕೊಟ್ಟಿದೆ. ಇದನ್ನ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯ ಕುರಿತು
ಆನೇಕಲ್ ತಾಲೂಕಿನಲ್ಲಿ ಒಟ್ಟಾರೆಯಾಗಿ 1 ಲಕ್ಷ ಎರಡು ಸಾವಿರ ಕುಟುಂಬಗಳು ಇದ್ದು 90 ಸಾವಿರ ಕುಟುಂಬ ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯುತ್ತಿವೆ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆ ಸೌಲಭ್ಯದಿಂದ ವಂಚಿತರಾದ ಕುಟುಂಬಗಳಿಗೂ ಶೀಘ್ರದಲ್ಲಿಯೆ ಸೌಲಭ್ಯ ಪಡೆಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು ಆನೇಕಲ್ ಶಾಸಕರು. ಇನ್ನು ಇದೇ ಸಂದರ್ಭದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಯುಕ್ತ ಡಾ. ಕೆ. ರಾಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯನಿರ್ದೇಶಕ ಲಕ್ಷ್ಮಣ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು, ಪೊಲೀಸ್ ವರಿಷ್ಠಾಧಿಕಾರಿಗಳಾದ ಪುರುಶೋತ್ತಮ್ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಂವಿಧಾನ ಜಾಗೃತಿ ಜಾಥ
ಭಾರತ ಸಂವಿಧಾನ ಅಂಗೀಕರಿಸಿ 75ನೇ ವರ್ಷದ ಆಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಂವಿಧಾನ ಪೀಠಿಕೆ ಸ್ಥಬ್ಧ ಚಿತ್ರದ ಮೆರವಣಿಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗೆ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಜನವರಿ 26 2024 ರಿಂದ ಫೆಬ್ರವರಿ 23 2024 ರವರೆಗೆ ಸಂಚರಿಸಲಿದೆ.












Click it and Unblock the Notifications