DK Shivakumar: ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಕೊಟ್ಟ ಸ್ಪಷ್ಟನೆ ಏನು?
ಡಿಕೆ ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್‌ನ ನಿಜವಾದ ಮುಖವಾಡ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ದೂರಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೂ ಕಾರಣವಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಖುದ್ದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರು, ʼನಾನು ಹಾಗೆ ಹೇಳಿಯೇ ಇಲ್ಲ, ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ.ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ, ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ ಎಂದೂ ಎಚ್ಚರಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ಸಂವಿಧಾನವನ್ನು ಜಾರಿಗೆ ತಂದಿದ್ದೇ ನಮ್ಮ ಪಕ್ಷ. ಸಂವಿಧಾನದ ಮಹತ್ವ ಬೇರೆಲ್ಲರಿಗಿಂತ ನಮಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ವಿಫಲವಾಗಿದೆ. ಬಜೆಟ್‌ನಲ್ಲಿ ಏನೂ ಇಲ್ಲದೇ ಇರುವ ಕಾರಣಕ್ಕೆ ಬಿಜೆಪಿ ಈ ರೀತಿ ಇಲ್ಲಸಲ್ಲದ ವಿಚಾರ ಪ್ರಸ್ತಾವ ಮಾಡುತ್ತಿದೆ. ಇದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮುಂದುವರೆದಿರುವ ರಾಜಕೀಯ ಪಿತೂರಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಬದಲಾವಣೆ ಬಗ್ಗೆ ನಾನು ಹೇಳಿಯೇ ಇಲ್ಲ, ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಕಳೆದ 36 ವರ್ಷಗಳಿಂದ ನಾನು ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯವಾದ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ.ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ದೂರಿದ್ದಾರೆ.

ಹತಾಶೆಗೊಂಡಿರುವ ಬಿಜೆಪಿಯು ಕಾಂಗ್ರೆಸ್ ಪಕ್ಷ ಮತ್ತು ನನ್ನ ಮೇಲೆ ಸುಳ್ಳು ಹೇಳಿಕೆಗಳನ್ನು ಹೊರಿಸುವ ಮೂಲಕ ನಾಚಿಕೆಗೇಡಿನ ಮತ್ತು ಸ್ಪಷ್ಟವಾದ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬಿಜೆಪಿ ಮತ್ತು ಅದರ ಸುಳ್ಳು ಸಚಿವರು ತಿಳಿದುಕೊಳ್ಳಬೇಕು. ಮಸೂದೆಯ ಕುರಿತು ಚರ್ಚೆ ನಡೆದಾಗ ನಾನು ವಿಧಾನಸಭೆಯಲ್ಲಿ ಇರಲಿಲ್ಲ. ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನವನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಐತಿಹಾಸಿಕವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಸಂವಿಧಾನವನ್ನು ರಚಿಸಿತು. ಬಿಜೆಪಿಯ ಮಾತೃ ಸಂಸ್ಥೆ ಅದನ್ನು ವಿರೋಧಿಸಿತು. ಕಳೆದ ಸಂಸತ್ತಿನವರೆಗೂ ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಬಯಸಿತ್ತು. ಬಡವರು ಮತ್ತು ಹಿಂದುಳಿದವರಿಗೆ ಹಕ್ಕುಗಳನ್ನು ನಿರಾಕರಿಸಲು 400 ಸ್ಥಾನಗಳನ್ನು ಕೇಳುತ್ತಿತ್ತು. ತಮ್ಮ ಪಾಪಗಳನ್ನು ಮರೆಮಾಡಲು, ಅವರು ಈಗ ಕಾಂಗ್ರೆಸ್ ಮತ್ತು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಅಲ್ಲದೆ, ಕರ್ನಾಟಕದಲ್ಲಿ ಮೀಸಲಾತಿಯನ್ನು ಹಿಂದುಳಿದಿರುವಿಕೆಯ ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ. ಬಡವರು ಮತ್ತು ಹಿಂದುಳಿದವರಿಗೆ ಸುಮಾರು 52,000 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾಯಿಸುವ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಕೋಪಗೊಂಡಿದೆ. ಗ್ಯಾರಂಟಿಗಳನ್ನು ಹೇಗಾದರೂ ಮಾಡಿ ರದ್ದುಗೊಳಿಸುವುದು ಅವರ ದುಷ್ಟ ಯೋಜನೆ. ಅದು ಎಂದಿಗೂ ಸಂಭವಿಸುವುದಿಲ್ಲ. ನನ್ನ ಮೃತ ದೇಹದ ಮೇಲೆ ಮಾತ್ರ ಆಗಬಹುದು. ಗ್ಯಾರಂಟಿಗಳನ್ನ ರಕ್ಷಿಸಲು ನಾನು ಈ ಹೋರಾಟ ಮುಂದುವರಿಸುತ್ತೇನೆ. ಬಿಜೆಪಿಯ ಈ ಪಿತೂರಿಗಳು ವಿಫಲಗೊಳ್ಳುತ್ತವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications