Karnataka Dams Water Level: ಮಳೆ ತಗ್ಗಿದ ಹಿನ್ನೆಲೆ ಹಲವು ಜಲಾಶಯಗಳ ಒಳಹರಿವು ಕುಸಿತ
ಕರ್ನಾಟಕ, ಆಗಸ್ಟ್, 02: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದು, ಪರಿಣಾಮ ಜಲಾಶಯಗಳ ಒಳಹರಿವಿನ ಪ್ರಮಾಣವೂ ಇಳಿಕೆಯಾಗಿದೆ. ಹಾಗಾದರೆ ಕಬಿನಿ, ಕೆಆರ್‌ಎಸ್, ಆಲಮಟ್ಟ ಜಲಾಶಯಗಳ ಒಳಹರಿವಿನ ಪ್ರಮಾಣ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯದ (KRS)ನೀರಿನ ಮಟ್ಟ ಇದೀಗ 113.42 ಅಡಿ ಇದ್ದು, ಒಳಹರಿವು 6391 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಜಲಾಶಯ ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣ 23081 ಕ್ಯೂಸೆಕ್ ಇತ್ತು. ಮತ್ತೊಂದೆಡೆ ಇದೀಗ ಹೊರಹರಿವಿನ ಪ್ರಮಾಣ 3193 ಕ್ಯೂಸೆಕ್ ಇದ್ದರೆ ಹಿಂದಿನ ವರ್ಷ 22,872 ಕ್ಯೂಸೆಕ್ ನೀರನ್ನು ಇದೇ ಅವಧಿಯಲ್ಲಿ ನಾಲೆಗಳಿಗೆ ಹರಿಸಲಾಗಿತ್ತು.

124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ 113.42 ಅಡಿ ನೀರಿದೆ. ಭರ್ತಿಗೆ ಇನ್ನೂ 11 ಅಡಿಯಷ್ಟು ನೀರು ಬರಬೇಕಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಪ್ರಮಾಣ ಕೊಂಚ ಕಡಿಮೆಯಿದೆ. ಒಂದು ವೇಳೆ ಕೊಡಗಿನಲ್ಲಿ ಮಳೆರಾಯ ಅಬ್ಬರಿಸಿದರೆ ಮಾತ್ರ ಜಲಾಶಯಕ್ಕೆ ಮತ್ತಷ್ಟು ನೀರು ಹರಿದುಬರುವ ಸಾಧ್ಯತೆಯಿದೆ.
ಆಲಮಟ್ಟಿ ಜಲಾಶಯದ ಒಳಹರಿವು
ಇನ್ನು ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಇದೆ. ಆದರೆ ನಾಲ್ಕೈದು ದಿನಕ್ಕೆ ಹೋಲಿಸಿದರೆ ಒಳಹರಿವಿನ ಪ್ರಮಾಣ ಇಳಿಕೆಯಾಗಿದೆ. ಇದೀಗ 1,28,158 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, 123.081 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈವರೆಗೂ 108.347ಟಿಎಂಸಿ ನೀರು ಸಂಗ್ರಹವಾಗಿದ್ದು, 90.727 ಟಿಎಂಸಿಯಷ್ಟು ನೀರಿನ ಪ್ರಮಾಣ ಬಳಕೆಗೆ ಲಭ್ಯವಾಗಿದೆ.
ಜಲಾಶಯದಿಂದ 57,731 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಕೆರೆ ತುಂಬಿಸಲು 280 ಕ್ಯೂಸೆಕ್, ವಿದ್ಯುತ್ ಉತ್ಪಾದನೆಗೆ 42,000 ಕ್ಯೂಸೆಕ್, ನದಿ ಮೂಲಕ 15,000 ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಬಿನಿ ಜಲಾಶಯದ ಒಳಹರಿವು
ಕೇರಳದಲ್ಲಿ ನಾಲ್ಕೈದು ದಿನಗಳಿಂದ ಮಳೆ ತಗ್ಗಿದ ಹಿನ್ನೆಲೆ ಕಬಿನ ಜಲಾಶಯದ ಒಳಹರಿವಿನ ಪ್ರಮಾಣ ತಗ್ಗಿದೆ. ಆದರೆ ಈವರೆಗೂ ಸುರಿದ ಮಳೆಗೆ ಜಲಾಶಯ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 2,283.40 ಅಡಿ ನೀರಿದೆ. ಜಲಾಶಯದಲ್ಲಿ ಇದೀಗ 4,373 ಕ್ಯೂಸೆಕ್ ಒಳಹರಿವು ಇದ್ದರೆ, ಹಿಂದಿನ ವರ್ಷ ಇದೇ ದಿನ 7072 ಕ್ಯೂಸೆಕ್ ಒಳಹರಿವು ಇತ್ತು.
ಇನ್ನು ಹೊರಹರಿವಿನ ಪ್ರಮಾಣ 3,500 ಕ್ಯೂಸೆಕ್ ನೀರು ಇದ್ದರೆ, ಹಿಂದಿನ ವರ್ಷ ಇದೇ ದಿನ 6500 ಕ್ಯೂಸೆಕ್ ನೀರು ಹೊರ ಹರಿಸಲಾಗಿತ್ತು. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದ್ದು, ಸದ್ಯ 19.12 ಕ್ಯೂಸೆಕ್ ಸಂಗ್ರಹವಾಗಿದೆ. ಅಗತ್ಯ ಬಳಕೆಗೆ 9.31 ಟಿಎಂಸಿ ನೀರು ಲಭ್ಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿ ನೀರು 15 ದಿನದಿಂದಲೇ ಹೊರ ಬಿಡಲಾಗುತ್ತಿದೆ. ನಾಲ್ಕೈದು ದಿನಗಳಿಗೆ ಹೋಲಿಸಿದರೆ ಒಳಹರಿವಿನ ಪ್ರಮಾಣ ಕಡಿಮೆ ಆಗಿರುವುದರಿಂದ ಹೊರಹರಿವು ಕೂಡ ತಗ್ಗಿದೆ. ಒಂದು ವೇಳೆ ಕೇರಳದಲ್ಲಿ ಮತ್ತೆ ಮಳೆಯಾದರೆ ಜಲಾಶಯದ ಒಳಹರಿವಿನ ಪ್ರಮಾಣ ಮತ್ತೇ ಏರಿಕೆಯಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಆಗಸ್ಟ್ ಅಂತ್ಯದ ವೇಳೆಗೆ ಮಳೆರಾಯ ಅಬ್ಬರಿಸಿ ಬೊಬ್ಬರೆಯಲಿದ್ದಾನೆ. ಒಂದು ವೇಳೆ ಭಾರೀ ಮಳೆಯಾದಲ್ಲಿ ಬಹುತೇಕ ಜಲಾಶಯಗಳ ನೀರಿನ ಒಳಹರಿವಿನ ಪ್ರಮಾಣ ಮತ್ತೆ ಹೆಚ್ಚಳ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.












Click it and Unblock the Notifications