ಮೋದಿ-ಶಾ ಜೋಡಿಯ ಮಸಲತ್ತಿಗೆ ಬೊಮ್ಮಾಯಿ ರಾಜಕೀಯ ನಿವೃತ್ತಿ ಘೋಷಿಸಿದರೂ ಆಶ್ಚರ್ಯವಿಲ್ಲ!: ಕಾಂಗ್ರೆಸ್
ಬೆಂಗಳೂರು, ಏಪ್ರಿಲ್. 11: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ರೂಪ ಪಡೆಯುತ್ತಿದೆ. ಅನೇಕ ಗೊಂದಲಗಳಿಗೆ ಕಾರಣವಾಗಿರುವ ಈ ಘಟನೆಯನ್ನು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೆ ಕಾಂಗ್ರೆಸ್ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿಯನ್ನು ಲೇವಡಿ ಮಾಡಿದೆ.
ಈಶ್ವರಪ್ಪ ನಿವೃತ್ತಿ ಘೋಷಣೆ ವಿಷಯವನ್ನಿಟ್ಟುಕೊಂಡು ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ರಾಜಕಾರಣಿಗಳ ಬದುಕು ದುರಂತ ಅಂತ್ಯ ಕಾಣಲಿದೆ ಎಂದು ಭವಿಷ್ಯ ನುಡಿದಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇವರ ಮಸಲತ್ತಿಗೆ ರಾಜಕೀಯ ನಿವೃತ್ತಿ ಘೋಷಿಸಿದರೆ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದೆ.

"ಮೊ-ಶಾ ಜೋಡಿಯ ಮಸಲತ್ತು ನೋಡಿದರೆ ಬೊಮ್ಮಾಯಿಯವರೂ ರಾಜಕೀಯ ನಿವೃತ್ತಿ ಘೋಷಿಸಿದರೆ ಯಾವುದೇ ಆಶ್ಚರ್ಯವಿಲ್ಲ! ಜೋಶಿ, ಸಂತೋಷರನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬೊಮ್ಮಾಯಿಯವರು ಅದೆಷ್ಟೇ ನಾಗಪುರದ ನೌಕರರು ಎನಿಸಿಕೊಂಡರೂ RSSಗೆ ಅಪಥ್ಯವೇ.. ಯಡಿಯೂರಪ್ಪರಂತೆ ಬೊಮ್ಮಾಯಿಯವರ ರಾಜಕೀಯ ಬದುಕೂ ದುರಂತ ಅಂತ್ಯ ಕಾಣಲಿದೆ" ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.
ಮೊ-ಶಾ ಜೋಡಿಯ ಮಸಲತ್ತು ನೋಡಿದರೆ ಬೊಮ್ಮಾಯಿಯವರೂ ರಾಜಕೀಯ ನಿವೃತ್ತಿ ಘೋಷಿಸಿದರೆ ಯಾವುದೇ ಆಶ್ಚರ್ಯವಿಲ್ಲ!
— Karnataka Congress (@INCKarnataka) April 11, 2023
ಜೋಶಿ, ಸಂತೋಷರನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬೊಮ್ಮಾಯಿಯವರು ಅದೆಷ್ಟೇ ನಾಗಪುರದ ನೌಕರರು ಎನಿಸಿಕೊಂಡರೂ RSSಗೆ ಅಪಥ್ಯವೇ..
ಯಡಿಯೂರಪ್ಪರಂತೆ ಬೊಮ್ಮಾಯಿಯವರ ರಾಜಕೀಯ ಬದುಕೂ ದುರಂತ ಅಂತ್ಯ ಕಾಣಲಿದೆ.
"ಯಡಿಯೂರಪ್ಪನವರನ್ನು ಕಣ್ಣೀರು ಹಾಕಿಸಿ ಪದಚ್ಯುತಿ ಮಾಡಲಾಯ್ತು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಶ್ವರಪ್ಪನವರ ರಾಜಕೀಯವನ್ನೇ ಮುಗಿಸಿಯಾಯ್ತು. ಜಗದೀಶ್ ಶೆಟ್ಟರ್ ಕಾಲವೂ ಸನ್ನಿಹಿತ. ಅಲ್ಲಿಗೆ ಬಿಜೆಪಿಯಲ್ಲಿ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕತ್ವವನ್ನು ಕಿತ್ತು ನಾಗಪುರದ ನೌಕರರಾದ ಜೋಶಿ ಹಾಗೂ ಸಂತೋಷ ಕೂಟ ಆಪೋಷನ ತೆಗೆದುಕೊಂಡಾಯ್ತು!" ಎಂದು ಬಿ.ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದೆ.

"ಟಿಕೆಟ್ ಘೋಷಣೆಯ ಮುನ್ನವೇ ವಿಕೆಟ್ ಪತನ ಶುರುವಾಗಿದೆ. ರನ್ ಬಾರಿಸದೆಯೇ ಆಲ್ ಔಟ್ ಆಗುವ ಎಲ್ಲಾ ಲಕ್ಷಣಗಳೂ ಬಿಜೆಪಿಯಲ್ಲಿ ಕಾಣುತ್ತಿವೆ! ಡಿಯರ್ ಕರ್ನಾಟಕ ಬಿಜೆಪಿ, ಈಗ ಸುಧಾರಿಸಿಕೊಂಡು, ಸಾವರಿಸಿಕೊಂಡು 5 ವರ್ಷ ಕಳೆದ ಮೇಲೆ ಚುನಾವಣೆಗೆ ಬನ್ನಿ!" ಎಂದು ಸರಣಿ ರಾಜಕೀಯ ನಿವೃತ್ತಿಗಳ ಬಗ್ಗೆ ಬಿಜೆಪಿ ಕಾಲೆಳೆಯುವ ಕೆಲಸ ಮಾಡುತ್ತಿದೆ ಕಾಂಗ್ರೆಸ್.
ಸಿಎಂ ಬೊಮ್ಮಾಯಿ ಅವರನ್ನು ಮತ್ತೆ ಬೊಂಬೆ ಸಿಎಂ ಎಂದು ಆಡಿಕೊಂಡಿರುವ ಕಾಂಗ್ರೆಸ್, "ಸಿಎಂ ಬಸವರಾಜ ಬೊಮ್ಮಾಯಿ ಅವರು ವರ್ಷ ಪೂರ್ತಿ ದೆಹಲಿಗೆ ಅಲೆದರೂ ಸಂಪುಟ ರಚನೆಗೆ ಅನುಮತಿ ದೊರಕಲಿಲ್ಲ. ಈಗ ಮೂರು ದಿನ ಸಭೆ ನಡೆಸಿದರೂ ಒಂದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಲಾಗಲಿಲ್ಲ. ಇದಕ್ಕೇ ಅಲ್ಲವೇ ನಾವು ಪಪೆಟ್ ಸಿಎಂ ಎನ್ನುವುದು! ಇಂತಹ RSS ಕೈಗೊಂಬೆಯಾಗಿರುವ ಕರ್ನಾಟಕ ಬಿಜೆಪಿ ಪಕ್ಷದಿಂದ ಕರ್ನಾಟಕದ ಹಿತ ಕಾಯಲು ಸಾಧ್ಯವೇ..?" ಎಂದು ಪ್ರಶ್ನಿಸಿದೆ.
"ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ!. ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಕೆ.ಎಸ್. ಈಶ್ವರಪ್ಪ ಈಗ ಟಿಕೆಟ್‌ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು" ಎಂದಿದೆ.
ಮಂಗಳವಾರ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ. ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದು, "ತಾವು ಸ್ವ-ಇಚ್ಚೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು. ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.












Click it and Unblock the Notifications