ಅವಧಿ ಮೀರಿದ ಔಷಧದಂತೆ ನಿರುಪಯೋಗಿಯಾಗಿರುವ ನಳೀನ್ ಕುಮಾರ್: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು, ಆಗಸ್ಟ್ 18: ಚುನಾವಣೆ ನಂತರ ಬಿಜೆಪಿಯ ಸ್ಥಿತಿ ಬಿರುಗಾಳಿಗೆ ಸಿಲುಕಿದ ನಾವಿಕನಿಲ್ಲದ ನೌಕೆಯಂತಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ, 'ಒಂದೆಡೆ ಒಬ್ಬರಿಗೊಬ್ಬರು ಹತ್ಯೆಗೆ ಷಡ್ಯಂತ್ರ ರೂಪಿಸುವವರು, ಮತ್ತೊಂದೆಡೆ ಒಬ್ಬರಿಗೊಬ್ಬರು ರಾಜಕೀಯವಾಗಿ ಸಮಾಧಿ ತೋಡುವವರು, ಇನ್ನೊಂದೆಡೆ ಒಳಗೊಳಗೇ ಕುದಿಯುವವರು ಬಿಜೆಪಿಯಲ್ಲಿದ್ದಾರೆ' ಎಂದು ಟೀಕಿಸಿದೆ.

'ಮಾಜಿ ಸಚಿವ ಸೋಮಶೇಖರ್ ಅವರು ಪಿತೂರಿಗಾರರ ಬಗ್ಗೆ ದೂರು ನೀಡಿದರೂ ಕ್ರಮವಿಲ್ಲ ಎಂದು ಗೋಳಾಡುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಬೇಕಾದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಮೀರಿದ ಔಷಧದಂತೆ ನಿರುಪಯೋಗಿ ಆಗಿದ್ದಾರೆ. ಶಾಡೋ ಅಧ್ಯಕ್ಷ ಪ್ರಹ್ಲಾದ್ ಜೋಶಿ ನಾಪತ್ತೆಯಾಗಿದ್ದಾರೆ. ಬಿಜೆಪಿಗೆ ಆಂತರಿಕ ಕಲಹ ನಿಭಾಸಲು ಒಬ್ಬ ರಾಜ್ಯಾಧ್ಯಕ್ಷ, ಸರ್ಕಾರವನ್ನು ಎದುರಿಸಲು ಒಬ್ಬ ವಿಪಕ್ಷ ನಾಯಕ ಸಿಗದಷ್ಟು ದಿವಾಳಿಯಾಗಿಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಇರುವ ರಾಜ್ಯಾಧ್ಯಕ್ಷ ಕೆಲಸ ಮಾಡದೆ, ಹೊಸ ರಾಜ್ಯಾಧ್ಯಕ್ಷ ಸಿಗದೆ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ, ಆಂತರಿಕ ಕಲಹ ನಿಭಾಯಿಸಲಾಗದೆ, ಹೈಕಮಾಂಡ್ ತಿರಸ್ಕಾರದಿಂದ ವಿಲವಿಲ ಒದ್ದಾಡುತ್ತಿರುವ ಬಿಜೆಪಿಗೆ ಯಾವ ಹೋಲಿಕೆ ಸೂಕ್ತವಾಗಬಹುದು. ಯಜಮಾನನಿಲ್ಲದ ಮನೆ, ಡ್ರೈವರ್ ಇಲ್ಲದ ಡಕೋಟಾ ಇಂಜಿನ್, ನಾವಿಕನಿಲ್ಲದ ನೌಕೆ, ಅಂಪೈರ್ ಇಲ್ಲದ WWF ವೇದಿಕೆ' ಎಂದು ಕಾಂಗ್ರೆಸ್ ಛೇಡಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಕೆಲವು ಬಿಜೆಪಿ ಶಾಸಕರು ಮತ್ತೆ ಕೈ ಪಾಳಯಕ್ಕೆ ಮರಳುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ.
2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕರಿಂದ ಐದು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಶಾಸಕರು ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019 ರಲ್ಲಿ ಹದಿನಾಲ್ಕು ಕಾಂಗ್ರೆಸ್ ಶಾಸಕರು ಮತ್ತು ಮೂವರು ಜೆಡಿಎಸ್ ಶಾಸಕರು ಎರಡು ಪಕ್ಷಗಳನ್ನು ತೊರೆದಿದ್ದರು.
ಮಾಜಿ ಸಚಿವ ಹಾಗೂ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಮಾಜಿ ಸಚಿವ ಹಾಗೂ ಕೆಆರ್ ಪುರದ ಶಾಸಕ ಬೈರತಿ ಬಸವರಾಜ, ಮಾಜಿ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ ಮತ್ತೆ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.












Click it and Unblock the Notifications