Cabinet Expansion: 20 ಮಂತ್ರಿಸ್ಥಾನಕ್ಕೆ 45 ಆಕಾಂಕ್ಷಿಗಳು: ಕುತೂಹಲ ಹೆಚ್ಚಿಸಿದ ಡಿಕೆ, ಸಿದ್ದು, ಹರಿಪ್ರಸಾದ್ ದೆಹಲಿ ಭೇಟಿ
ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದು ಹೋಗಿದೆ. ಇನ್ನೂ 20 ಮಂತ್ರಿ ಸ್ಥಾನಗಳು ಖಾಲಿ ಇವೆ. ದಿನೇ ದಿನೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಮಂತ್ರಿಗಿರಿ ಕೊಡಿಸಲು ಉತ್ಸಾಹ ತೋರಿದ್ದಾರೆ. ಇದೆಲ್ಲ ಬೆಳವಣಿಗೆ ಮಧ್ಯೆ ನಾಳೆ ಮಂಗಳವಾರ (ಜುಲೈ 14) ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಗೆ ತೆರಳಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಲದ ಸಂಪುಟ ವಿಸ್ತರಣೆ ಹೆಚ್ಚು ಕುತೂಹಲ ಕೆರಳಿಸಿದೆ.
ವಿದೇಶದಲ್ಲಿದ್ದ ರಾಹುಲ್ ಗಾಂಧಿಯವರು ಭಾನುವಾರ ರಾತ್ರಿ ಮರಳಿದ್ದು, ಅವರ ಭೇಟಿಗೆ ಮಂಗಳವಾರ ಅವಕಾಶ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಪರ ಬ್ಯಾಟಿಂಗ್ ಮಾಡಲಿದ್ದು, ಅರ್ಹರಿಗೆ ಸ್ಥಾನ ನೀಡುವಂತೆ, ಹೊಸಬರಿಗೂ ಅವಕಾಶ ನೀಡುವಂತೆ ಕೋರಬಹುದು. ಈಗಾಗಲೇ ಸಿದ್ಧವಾಗಿರುವ ಸಚಿವಾಕಾಂಕ್ಷಿಗಳ ಪಟ್ಟಿ ಯುವ ನಾಯಕರು ಸೇರಿದಂತೆ ಒಟ್ಟು 45ಕ್ಕೂ ಹೆಚ್ಚು ಆಕಾಂಕ್ಷಿ ಶಾಸಕರಿದ್ದಾರೆ. ಒಂದು ವೇಳೆ ಸೀಟು ಸಿಗದ ಶಾಸಕರನ್ನು ಸಂಬಾಳಿಸುವುದೇ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಬಹುದು.

2028ರ ಚುನಾವಣಾ ಗುರಿಯೊಂದಿಗೆ ಸಂಪುಟ ವಿಸ್ತರಣೆ
ಸಿಎಂ ಪದಗ್ರಹಣ ವೇಳೆ ಎರಡನೇ ಹಂತದಲ್ಲಿ ಮುಂದಿನ ಎರಡು ವಾರಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಇದೀಗ ಎರಡು ತಿಂಗಳಾದರೂ ಅನೇಕ ಖಾತೆಗಳಿಗೆ ಸಚಿವರೇ ಇಲ್ಲದಾಗಿದೆ. ಇಂದಿನ ಸಂಪುಟ ವಿಸ್ತರಣೆಯು 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲ ಚತುರ, ಸಾಮರ್ಥ್ಯ ಹೊಂದಿದವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಮತ್ತೊಂದೆಡೆ ಪ್ರಬಲ ಆಕಾಂಕ್ಷಿಗಳು ತಮಗೆ ಸ್ಥಾನ ನೀಡದಿದ್ದರೆ ಮುಂದೇನು ಮಾಡಬೇಕೆಂದು ಚಿಂತಿಸುತ್ತಿದ್ದಾರೆ. ಕೆಲವರು 2028 ರಲ್ಲಿ ಪಕ್ಷ ತ್ಯಜಿಸಲೂಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಲ್ಲಾವಾರು, ಸಮುದಾಯವಾರು ಶಾಸಕರಿಗೆ ಮಂತ್ರಿಸ್ಥಾನ?
ಹೈಕಮಾಂಡ್ ಭೇಟಿಯ ವೇಳೆ ಅಲ್ಪಸಂಖ್ಯಾತ, ಹಿಂದುಳಿದ ಸೇರಿದಂತೆ ಸಮುದಾಯವಾರು, ಜಿಲ್ಲಾವಾರು ಬೇಡಿಕೆಗಳನ್ನು ರಾಜ್ಯ ನಾಯಕರು ವರಿಷ್ಠರ ಮುಂದಿಡಲಿದ್ದಾರೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆ.ಸಿ.ವೇಣುಗೋಪಾಲ್ ಸೇರಿ ವರಿಷ್ಠ ಒಂದೆರಡು ಆಷಾಢದ ಒಳಗೆ ಸಿದ್ಧವಾಗಿರುವ ಸಚಿವ ಸಂಪುಟ ಪಟ್ಟಿಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧವಾದ ಸಚಿವಾಕಾಂಕ್ಷಿಗಳ ಪಟ್ಟಿಗೆ ಒಪ್ಪಿಗೆ ನೀಡುವುದು ತಡವಾದಲ್ಲಿ ಮತ್ತೆ ಆಷಾಢ ಮುಗಿಯುವವರೆಗೂ ಸುಮಾರು ಒಂದು ತಿಂಗಳು ಸಂಪುಟ ವಿಸ್ತರಣೆ ಮುಂದೂಡಿಕೆ ಆಗುವ ಸಂಭವವಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಚುನಾವಣೆಗೆ ಇನ್ನಷ್ಟು ಸಮಯ ಕೋರಿ ರಾಜ್ಯ ಸರ್ಕಾರ ಚುನಾವಣೆ ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಇಂದು ಸೋಮವಾರ (ಜುಲೈ 13) ವಿಚಾರಣಗೆ ಬರಲಿದೆ. ಜಿಬಿಎ ಚುನಾವಣೆಗೆ ಮುಂದೂಡಿಕೆ ಆಗದೇ ತ್ವರಿತವಾಗಿ ನಡೆಸಲು ಆದೇಶ ಹೊರಡಿಸಿದೆ. ಅಲ್ಪ ಸಚಿವರು, ಸಚಿವಾಕಾಂಕ್ಷಿಗಳ ಜೊತೆಗೆ ಜಿಬಿಎ ಚುನಾವಣೆ ಮುಗಿಸಿ ನಂತರ ಸಂಪುಟ ಸರ್ಜರಿಗೆ ಕೈಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಒಟ್ಟಾರೆ ಈ ಬಾರಿ ಸಚಿವ ಸಂಪುಟದ ಕಸರತ್ತು ಹೆಚ್ಚು ಸದ್ದು ಮಾಡುತ್ತಿದೆ. ಇದೆಲ್ಲ ಬೆಳವಣಿಗೆ ನಡುವೆ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದರ ಮೇಲೆ ಕುತೂಲಹ ಹೆಚ್ಚಾಗಿದೆ.













Click it and Unblock the Notifications