ನೀವು ನಿಜವಾದ ರಾಮಭಕ್ತರಾಗಿದ್ರೆ ಈ ಕೆಲಸ ಮಾಡಿ, ಪ್ರಿಯಾಂಕ್ ಹಾಕಿದ ಸವಾಲೇನು?
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನಡುವೆ ಟಾಕ್ ವಾರ್ ಶುರುವಾಗಿದೆ. ತಪ್ಪು ಕೆಲಸ ಮಾಡಿ ಜೈಶ್ರೀರಾಮ್ ಅಂತಾರೆ ಎನ್ನುವ ಪ್ರಿಯಾಂಕ್ ಹೇಳಿಕೆಗೆ ಕಿಡಿಕಾರಿದ್ದ ಅಶೋಕ್ ಅವರು ಹಿಂದೂಗಳ ಬಗ್ಗೆ ಮಾತನಾಡುವಾಗ ಎಚ್ಚರ ಎಂದು ಹೇಳಿದ್ದರು. ಇದೀಗ ಈ ವಾಗ್ಯುದ್ಧ ಮತ್ತೆ ಮುಂದುವರಿದಿದ್ದು, ಪ್ರಿಯಾಂಕ್ ಅಶೋಕ್ ಅವರಿಗೆ ಸವಾಲು ಹಾಕಿದ್ದಾರೆ.
ಆತ್ಮೀಯ ಅಶೋಕ್ ಅಣ್ಣಾ, "ಜೈ ಶ್ರೀ ರಾಮ್" ಈ 3 ಪದಗಳ ಘೋಷಣೆಯನ್ನು ಜೋರಾಗಿ ಹೇಳುವುದರಿಂದ ನಿಮ್ಮ ಪಕ್ಷದ ಹಗರಣಗಳನ್ನು ಅಥವಾ ನಿಮ್ಮವರ ಅಸಮರ್ಥತೆಯನ್ನು ಮರೆಮಾಡಲು ಸಾಧ್ಯವಿಲ್ಲ. ಜೈ ಶ್ರೀ ರಾಮ್ ಎನ್ನುವುದನ್ನು ಬದಕು ಕಟ್ಟುವುದಕ್ಕಾಗಿ ಬಳಸಿ, ಭಕ್ತಿಗಾಗಿ ಬಳಸಿ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಅಲ್ಲ ಎಂದು ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.

ಜೈ ಶ್ರೀ ರಾಮ್ ಎನ್ನುವ ನಿಮ್ಮ ಪಕ್ಷದ ಯತ್ನಾಳ್ ಅವರು ವಿಶ್ವಗುರು ಬಸವಣ್ಣರನ್ನು ಹೇಡಿ ಎಂಬರ್ಥದಲ್ಲಿ ಮಾತನಾಡುತ್ತಾರೆ, ಅದಕ್ಕೆ ನಿಮ್ಮ ಸಹಮತವಿದೆಯೇ? ಜೈ ಶ್ರೀ ರಾಮ್ ಎಂದು ಹೇಳುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ, ಅದಕ್ಕೆ ನಿಮ್ಮ ಸಹಮತವಿದೆಯೇ? ಜೈ ಶ್ರೀ ರಾಮ್ ಎಂದು ಹೇಳುವ ಯಡಿಯೂರಪ್ಪನವರು ಪೋಕ್ಸೋ ಆರೋಪ ಎದುರಿಸುತ್ತಿದ್ದಾರೆ, ಅದು ನಿಮಗೆ ಹೆಮ್ಮೆಯ ವಿಷಯವೇ? ಎಂದು ಕುಟುಕಿದ್ದಾರೆ.
ಮುನಿರತ್ನ ವಿಧಾನಸೌಧದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ, ದಲಿತರನ್ನು ನಿಂದಿಸುತ್ತಾರೆ, ನಿಮಗೇ ಎಚ್‌ಐವಿ ಇಂಜೆಕ್ಟ್ ಮಾಡಲು ಯತ್ನಿಸುತ್ತಾರೆ, ನಂತರ ಜೈ ಶ್ರೀ ರಾಮ್ ಎನ್ನುತ್ತಾರೆ, ಇದಕ್ಕೆ ನಿಮ್ಮ ಸಹಮತವಿದೆಯೇ? ಅಕ್ರಮ ಹಣ ವರ್ಗಾವಣೆ ಕೇಸ್ ಎದುರಿಸುತ್ತಿರುವ ವಿಜಯೇಂದ್ರರವರೂ ಜೈ ಶ್ರೀರಾಮ್ ಹೇಳುತ್ತಾರೆ, ಅವರ ತಪ್ಪುಗಳನ್ನು ಮಾಫಿ ಮಾಡಿಬಿಡಬೇಕೆ? ಬಿಟ್ ಕಾಯಿನ್ ಹಗರಣ ನಡೆಸಿದವರೂ ಸಹ ಜೈ ಶ್ರೀ ರಾಮ್ ಎನ್ನುತ್ತಾರೆ, ಅವರ ಅಕ್ರಮಗಳೆಲ್ಲ ಸಕ್ರಮವಾಗಿಬಿಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಲಕ್ಷಾಂತರ ಯುವಕರ ಜೀವನವನ್ನು ಹಾಳುಮಾಡಿದ ಪಿಎಸ್‌ಐ ಹಗರಣ ಮತ್ತು ಇತರ ನೇಮಕಾತಿ ಹಗರಣಗಳನ್ನು ನಡೆಸಿದವರು ಜೈ ಶ್ರೀರಾಮ್ ಹೇಳುತ್ತಾರೆ, ಅವರ ಪಾಪ ಕಾರ್ಯಗಳು ಪುಣ್ಯ ಕಾರ್ಯಗಳಾಗಿಬಿಡುತ್ತದೆಯೇ? ಕಲ್ಯಾಣ ಕರ್ನಾಟಕದ ಜನರನ್ನು ವಂಚಿಸಿದ ಕೆಕೆಆರ್‌ಡಿಬಿ ಹಗರಣದ ಸೂತ್ರದಾರರೂ ಜೈ ಶ್ರೀರಾಮ್ ಹೇಳುತ್ತಾರೆ, ಇದು ನಿಮಗೆ ಮಹತ್ಕಾರ್ಯವಾಗಿ ಕಾಣುತ್ತದೆಯೇ? ಎಂದು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದವರೂ ಸಹ ಜೈ ಶ್ರೀರಾಮ್ ಹೇಳುತ್ತಾರೆ, ಅವರ ಅಪರಾಧಗಳು ಮಾಫಿಯಾಗುತ್ತವೆಯೇ? ಭೋವಿ ನಿಗಮದಲ್ಲಿ ಹಗರಣ ನಡೆಸಿ ಜನರನ್ನು ವಂಚಿಸಿದವರೂ ಜೈ ಶ್ರೀರಾಮ್ ಹೇಳುತ್ತಾರೆ, ಅದಕ್ಕೆ ನಿಮ್ಮ ಸಹಮತವಿದೆಯೇ? ಜೈ ಶ್ರೀ ರಾಮ್ ಎಂದು ಹೇಳುವುದರಿಂದ ನಿಮ್ಮ ಪಾಪಗಳು ತೊಳೆಯುವುದಿಲ್ಲ ಅಶೋಕ್ ಅವರೇ..ನೀವು ರಾಮರಾಜ್ಯದ ಆಡಳಿತ ನೀಡಿದ್ದರೆ, ನೀವು ರಾಮನ ಆದರ್ಶದಂತೆ ನಡೆದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ 66ಕ್ಕೆ ಕುಸಿದು ಕುಳಿತಿದ್ದೇಕೆ? ಉಪಚುನಾವಣೆಯಲ್ಲಿ ಮಕಾಡೆ ಮಲಗಿದ್ದೇಕೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ಅಶೋಕ್ ಅವರೇ, ನೀವು ನನಗೆ ಸವಾಲು ಹಾಕುವ ಬದಲು ನಿಮ್ಮ ಪಕ್ಷದವರೇ ನಿಮ್ಮ ಮೇಲೆ ಎಸೆದಿರುವ ಸವಾಲುಗಳಿಗೆ ಉತ್ತರಿಸಿ. ನೀವು ರಾಮಭಕ್ತರಾಗಿದ್ದರೆ ದಲಿತರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮತ್ತು ಎಚ್‌ಐವಿ ಪೀಡಿತ ಮಹಿಳೆಯನ್ನು ರಾಜಕೀಯ ದುರುದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಂಡ ಮುನಿರತ್ನ ಅವರನ್ನು ಪಕ್ಷದಿಂದ ಹೊರಹಾಕಿ. ಬಸವಣ್ಣನವರ ಘನತೆಯನ್ನು ರಕ್ಷಿಸಲು ಬಿಜೆಪಿಯವರು ಅಸಮರ್ಥರು ಎಂಬುದು ತಿಳಿದಿರುವ ಸಂಗತಿ, ಆದರೆ ಕನಿಷ್ಠ ಪಕ್ಷ ನಿಮ್ಮ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಂಪನಿಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ನಿಮ್ಮ ಗೌರವ ಉಳಿಸಿಕೊಳ್ಳಿ ಅಶೋಕ್ ಅಣ್ಣ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.












Click it and Unblock the Notifications