ಕಾಂಗ್ರೆಸ್ ಬಂದರೆ ರಾಜ್ಯದಲ್ಲಿ ಗಲಭೆಗಳಾಗಲಿವೆ ಎಂದ ಶಾ: ಇದು 'ಬಸವಣ್ಣನ ನಾಡು' ಎಂದು ತಿರುಗೇಟು ನೀಡಿದ ಡಿಕೆಶಿ
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂಬ ಅಮಿತ್ ಶಾ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಕೇವಲ ರಾಜಕೀಯಕ್ಕಾಗಿ ಕೇಂದ್ರ ಗೃಹ ಸಚಿವರು ಇಷ್ಟು ಕೀಳು ಮಟ್ಟಕ್ಕಿಳಿದಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯಿಂದ ಮಾತ್ರ ಇಂಥ ಅನಾಗರಿಕ ನಡೆ ಸಾಧ್ಯ. ಬಿಜೆಪಿ ಆಡಳಿತಕ್ಕಿಂತ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಜನರು ಯಾವಾಗಲೂ ಸುರಕ್ಷಿತವಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಾನತೆ ಮತ್ತು ಶಾಂತಿಯನ್ನು ಸಾರಿದ ಬಸವಣ್ಣನವರ ನಾಡಿದು' ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

'ಕೇಂದ್ರ ಗೃಹ ಸಚಿವರು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಪ್ರತಿಫಲ ಅನುಭವಿಸುತ್ತಾರೆ. ಬಿಜೆಪಿ ಪಾಪದ ಕೊಡ ತುಂಬಿದೆ. ಮೇ 13ಕ್ಕೆ ತಕ್ಕ ಶಾಸ್ತಿಯಾಗಲಿದೆ' ಎಂದೂ ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್
ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಕಟ ಕಾಂಗ್ರೆಸ್, 'ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಕ್ಕರೆ ರಾಜ್ಯದಲ್ಲಿ ಗಲಭೆ ಆಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೀವೇ ಗಲಭೆ ಸೃಷ್ಟಿಸುವುದಾಗಿ ರಾಜ್ಯದ ಜನತೆಗೆ ಧಮಕಿ ಹಾಕುತ್ತಿದ್ದಿರಾ? ಇಂತಹ ಬೆದರಿಕೆಗೆ ರಾಜ್ಯದ ಪ್ರಜ್ಞಾವಂತ ಜನ ಸೊಪ್ಪು ಹಾಕುವುದಿಲ್ಲ. ನೀವೊಬ್ಬ ಗೃಹ ಸಚಿವ ಎಂಬುದು ನೆನಪಿನಲ್ಲಿಡಿ' ಎಂದು ವಾಗ್ದಾಳಿ ನಡೆಸಿದೆ.

ಶಾ ಹೇಳಿಕೆಗೆ ಜೈರಾಮ್ ರಮೇಶ್ ಪ್ರತಿಕ್ರಿಯೆ
ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ನಾಚಿಕೆಯ ಬೆದರಿಸುವ ಹೇಳಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮೊಟ್ಟಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆಗೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಅಮಿತ್ ಶಾ ಹೇಳಿದ್ದೇನು?
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವು ಗಲಭೆಗಳಿಂದ ಪೀಡಿತವಾಗಲಿದೆ. ವಂಶಾಡಳಿತ ರಾಜಕೀಯವು ಉತ್ತುಂಗಕ್ಕೇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯವು ರಿವರ್ಸ್ ಗೇರ್‌ನಲ್ಲಿ ಸಾಗುತ್ತದೆ ಮತ್ತು ವ್ಯಾಪಕ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತದೆ ಎಂದು ಅವರು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲಿದ್ದು, ಇದು ರಾಜ್ಯದ ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ನೀಡುವ ಚುನಾವಣೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.












Click it and Unblock the Notifications