ಉಪ ಚುನಾವಣೆಯಲ್ಲಿ 3 ಕ್ಷೇತ್ರ ಗೆದ್ದ ಕಾಂಗ್ರೆಸ್ ಮುಂದೆ ಹೊಸ ಸವಾಲು!
ಬೆಂಗಳೂರು, ನವೆಂಬರ್ 26: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೂರು ಕ್ಷೇತ್ರಗಳ ಉಪ ಚುನಾವಣೆ ಗೆದ್ದು ಬೀಗಿದೆ. ಉಪ ಚುನಾವಣೆ ಫಲಿತಾಂಶ ನವೆಂಬರ್ 23ರಂದು ಪ್ರಕಟವಾಗಿದ್ದು, ಕಾಂಗ್ರೆಸ್ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆಯನ್ನು ಉಂಟು ಮಾಡಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಗೆದ್ದಿದ್ದ ಕ್ಷೇತ್ರವನ್ನು 'ಕೈ' ವಶ ಮಾಡಿಕೊಂಡು ಉತ್ಸಾಹದಲ್ಲಿದೆ.
ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಗೆದ್ದ ಬಳಿಕ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 136ಕ್ಕೆ ಏರಿಕೆಯಾಗಿದೆ. ಉಪ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಹೊಸ ಸವಾಲು ಎದುರಾಗಿದೆ. ಅದರು ವಿಧಾನ ಪರಿಷತ್ ನಾಮ ನಿರ್ದೇಶನದ ವಿಚಾರದಲ್ಲಿ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಕಾಂಗ್ರೆಸ್‌ನ ಸಿ. ಪಿ. ಯೋಗೇಶ್ವರ 25,413 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣೆಗೂ ಮೊದಲು ಬಿಜೆಪಿಯಲ್ಲಿದ್ದ, ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ. ಪಿ. ಯೋಗೇಶ್ವರ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿದ್ದು, ಉಪ ಚುನಾವಣೆ ನಡೆಯಬೇಕಿದೆ.
ಪರಿಷತ್ ನಾಮ ನಿರ್ದೇಶನ: ಸಭಾಪತಿಗಳು ಸೇರಿ ವಿಧಾನ ಪರಿಷತ್ ಒಟ್ಟು ಸದಸ್ಯ ಬಲ 75. ಸಿ. ಪಿ. ಯೋಗೇಶ್ವರ ರಾಜೀನಾಮೆ ಸೇರಿ ಒಟ್ಟು ಮೂರು ಸ್ಥಾನಗಳು ಈಗಾಗಲೇ ಪರಿಷತ್‌ನಲ್ಲಿ ಖಾಲಿಯಾಗಿವೆ. ಮತ್ತೊಂದು ಸ್ಥಾನ ಜನವರಿಯಲ್ಲಿ ಖಾಲಿಯಾಗಲಿದೆ. ಆದ್ದರಿಂದ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಈಗ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಸವಾಲು ಎದುರಾಗಿದೆ.
ಪರಿಷತ್ ಸದಸ್ಯರಾಗಿದ್ದ ಯು. ಬಿ. ವೆಂಕಟೇಶ್ ಮತ್ತು ಪ್ರಕಾಶ ರಾಠೊಡ್ ಅವಧಿ ಕಳೆದ ತಿಂಗಳು ಮುಕ್ತಾಯವಾಗಿದೆ. ಪ್ರಕಾಶ ರಾಠೊಡ್ ಎರಡು ಬಾರಿ ಪರಿಷತ್ ಸದಸ್ಯರಾಗಿದ್ದಾರೆ. ಆದ್ದರಿಂದ ಮತ್ತೊಮ್ಮೆ ಅವರ ನಾಮ ನಿರ್ದೇಶನ ಮಾಡುವ ಸಾಧ್ಯತೆ ಕಡಿಮೆ ಇದೆ ಎಂಬ ಸುದ್ದಿಗಳು ಹಬ್ಬಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಜ ಖರ್ಗೆ ಆಪ್ತ ವಲಯದ ನಾಯಕರಾದ ಯು. ಬಿ. ವೆಂಕಟೇಶ್‌ಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. ಆದ್ದರಿಂದ ಅವರನ್ನು ಸಹ ಪುನಃ ನಾಮ ನಿರ್ದೇಶನ ಮಾಡುವ ಸಾಧ್ಯತೆ ಕಡಿಮೆ ಇದೆ.
ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪರಿಷತ್ ನಾಮ ನಿರ್ದೇಶನದ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಹೆಸರನ್ನು ಸರ್ಕಾರ ನಾಮ ನಿರ್ದೇಶನ ಮಾಡಿ ರಾಜ್ಯಪಾಲರಿಗೆ ಕಳಿಸಲಿದೆ. ರಾಜ್ಯಪಾಲರ ಒಪ್ಪಿಗೆ ಬಳಿಕ ನಾಮ ನಿರ್ದೇಶನದ ಕುರಿತು ಘೋಷಣೆಯಾಗಲಿದೆ.
ನಾಲ್ಕು ಪರಿಷತ್ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಜೋರಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಪ್ತರಾಗಿರುವ ನಾಯಕರು ತೆರೆಮರೆಯಲ್ಲಿ ಪರಿಷತ್ ಸ್ಥಾನವನ್ನು ಪಡೆಯಲು ಪ್ರಯತ್ನವನ್ನು ನಡೆಸಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಲು ಸಹ ಕೆಲವು ನಾಯಕರು ತಯಾರಿ ನಡೆಸುತ್ತಿದ್ದಾರೆ.
ಸದ್ಯ ವಿ. ಎಸ್. ಉಗ್ರಪ್ಪ, ಸಿ. ಎಸ್. ದ್ವಾರಕನಾಥ್, ಬಾಲರಾಜ ನಾಯ್ಕ, ಬಿ. ಎಲ್. ಶಂಕರ್, ವಿನಯ್ ಕಾರ್ತಿಕ್, ನಟರಾಜ ಗೌಡ, ಪ್ರಕಾಶ್ ರಾಠೊಡ, ಯು. ಬಿ. ವೆಂಕಟೇಶ್ ಸೇರಿದಂತೆ ಹಲವು ನಾಯಕರ ಹೆಸರುಗಳು ಪರಿಷತ್ ನಾಮ ನಿರ್ದೇಶನಕ್ಕೆ ಕೇಳಿ ಬರುತ್ತಿವೆ. ಸರ್ಕಾರ ಯಾರನ್ನು ನಾಮ ನಿರ್ದೇಶನ ಮಾಡಲಿದೆ? ಎಂದು ಕಾದು ನೋಡಬೇಕಿದೆ.
ಒಂದು ವೇಳೆ ನಾಮ ನಿರ್ದೇಶನದ ಜಟಾಪಟಿ ಜೋರಾದರೆ ಹೈಕಮಾಂಡ್ ನಾಯಕರು ಸಹ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ. ಡಿಸೆಂಬರ್ 9 ರಿಂದ 20ರ ತನಕ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಳದ ಅಧಿವೇಶನ ನಡೆಯಲಿದೆ. ಈ ಸಮಯದಲ್ಲಿ ಪರಿಷತ್ ನಾಮ ನಿರ್ದೇಶನದ ಕುರಿತು ಸರ್ಕಾರ ಅಂತಿಮ ತೀರ್ಮಾನ ಮಾಡುವ ನಿರೀಕ್ಷೆ ಇದೆ.











Click it and Unblock the Notifications