ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!

Posted By:
Subscribe to Oneindia Kannada

ಬೆಂಗಳೂರು, ಮೇ 12 : ಕರ್ನಾಟಕದ 'ಭಾಗ್ಯ'ಗಳ ಸರ್ಕಾರ ಶುಕ್ರವಾರ ಮೂರು ವರ್ಷ ಪೂರ್ಣಗೊಳಿಸುತ್ತಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆ ಎಂದು ಹೇಳಿ ಸತ್ಯದ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷ ಪೂರೈಸಿದ್ದಾರೆ. 2018ರ ಚುನಾವಣೆ ಮೇಲೆ ಕಣ್ಣಿಟ್ಟು, ಮುಂದಿನ ಎರಡು ವರ್ಷಗಳ ಆಡಳಿತ ನಡೆಸಬೇಕಾಗಿದೆ.

2013ರ ಮೇ 13ರಂದು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ಪಡೆಯುತ್ತಿದ್ದಂತೆ ಹಲವು ಭಾಗ್ಯದ ಯೋಜನೆಗಳನ್ನು ಘೋಷಣೆ ಮಾಡಿ ಕರ್ನಾಟಕ 'ಭಾಗ್ಯ'ವಿದಾತ ಎನಿಸಿಕೊಂಡಿದ್ದಾರೆ. [ಸಿದ್ದರಾಮಯ್ಯ ಸರಕಾರ 'ಫೇಲ್' ಎಂದರು ನಮ್ಮ ಓದುಗರು]

Karnataka Congress celebrates completion of 3 years in government

ಲೋಕಸಭೆಯಿಂದ ಗ್ರಾಮ ಪಂಚಾಯಿತಿ ತನಕ ಎಲ್ಲಾ ಚುನಾವಣೆಗಳು ಮುಗಿದಿವೆ. ಎಲ್ಲಾ ಚುನಾವಣೆಗಳ ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರ ನಿಲುವೇನು ಎಂಬುದು ಹೊರಬಿದ್ದಿದೆ. ಸದ್ಯ, ಸಿದ್ದರಾಮಯ್ಯ ಅವರ ಕಣ್ಣು 2018ರ ವಿಧಾನಸಭೆ ಚುನಾವಣೆ ಮೇಲಿದೆ. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]

'ಮೂರು ವರ್ಷದ ಆಡಳಿತ ತೃಪ್ತಿ ತಂದಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳಲ್ಲಿ ಈಗಾಗಲೇ 100ನ್ನು ಈಡೇರಿಸಿದ್ದು, ಇನ್ನೂ ಎರಡು ವರ್ಷ ಅಧಿಕಾರವಿದ್ದು, ಈ ಅವಧಿಯಲ್ಲಿ ಉಳಿದ ಭರವಸೆಯನ್ನು ಪೂರೈಸುತ್ತೇವೆ. 2018ರಲ್ಲೂ ನಾವೇ ಮರಳಿ ಅಧಿಕಾರಕ್ಕೆ ಬರುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.

ಬೆನ್ನು ಬಿದ್ದ ವಿವಾದಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಜನರು ಮೆಚ್ಚಿಕೊಂಡಿರಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. [ಸಿದ್ದರಾಮಯ್ಯ ಮುಂದಿರುವ 10 ಸವಾಲುಗಳು]

ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸಿದ್ದರಾಮಯ್ಯ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾಯಕತ್ವ ಬದಲಾವಣೆಯಾಗಬೇಕು. ದಲಿತರಿಗೆ ಮುಖ್ಯಮಂತ್ರಿ ಪಟ್ಟ ನೀಡಬೇಕು. ಸಚಿವ ಸಂಪುಟ ವಿಸ್ತರಣೆಯಾಗಬೇಕು ಹೀಗೆ ಹಲವು ಬೇಡಿಕೆಗಳ ಪಟ್ಟಿ ಸಿದ್ಧವಾಗಿದೆ. ಆದರೆ, ಹೈಕಮಾಂಡ್ ನಾಯಕರು ಮಾತ್ರ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ! [ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ?]

2016 ಸಿದ್ದರಾಮಯ್ಯ ಪಾಲಿಗೆ ಶುಭ ಸೂಚನೆಯನ್ನು ತಂದಿಲ್ಲ. ವರ್ಷದ ಆರಂಭದಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಬೆನ್ನಿಗೆ ಬಿದ್ದಿವೆ. ವಜ್ರ ಖಚಿತ ವಾಚು, ಎಸಿಬಿ ರಚನೆ, ಪುತ್ರನಿಗೆ ಲ್ಯಾಬ್ ಟೆಂಡರ್, ಕುಡಿಯುವ ನೀರಿನ ಪ್ರಯೋಗಾಲಯ ಟೆಂಡರ್ ವಿವಾದ ಹೀಗೆ ಸರ್ಕಾರದ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿವೆ. [ಎಸಿಬಿ ರಚನೆ : ಸಿದ್ದರಾಮಯ್ಯ ಹೇಳುವುದೇನು?]

ಪ್ರತಿಪಕ್ಷಗಳು ತಮ್ಮ ಸರ್ಕಾರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿವೆ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿರುವ ಸಿದ್ದರಾಮಯ್ಯ ಅವರು ಮೇ ಅಂತ್ಯದಲ್ಲಿ ಸಂಪುಟ ಪುನಾರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆ ಮೂಲಕ ಮುಂದಿನ ಎರಡು ವರ್ಷದಲ್ಲಿ ಆಡಳಿತದಲ್ಲಿ ಬದಲಾವಣೆ ತರುವ ಸೂಚನೆ ನೀಡಿದ್ದಾರೆ.

Karnataka Congress celebrates completion of 3 years in government

ಸರ್ಕಾರಕ್ಕೆ ಸವಾಲು : ಕರ್ನಾಟಕದಲ್ಲಿ ಭೀಕರ ಬರಪರಿಸ್ಥಿತಿ ಇದೆ. ಸ್ವತಃ ಮುಖ್ಯಮಂತ್ರಿಗಳೇ ಮೂರು ಹಂತದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬರ ಪರಿಹಾರ ಕಾಮಗಾರಿಗಳನ್ನು ಚುರುಕಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಪ್ರಮುಖ ಸವಾಲುಗಳು ಸರ್ಕಾರ ಮುಂದಿವೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ಬೀಗುತ್ತಿರುವ ಸರ್ಕಾರ ಉದ್ಯಮಗಳನ್ನು ಸ್ಥಾಪಿಸಲು ತ್ವರಿತವಾಗಿ ಅವಕಾಶ ಮಾಡಿಕೊಡುವ ಸವಾಲನ್ನು ಎದುರಿಸುತ್ತಿದೆ.

'ಇನ್ನೂ ಎರಡು ವರ್ಷ ನಾನೇ ಮುಖ್ಯಮಂತ್ರಿ' ಎಂದು ಹಲವು ಬಾರಿ ಬಹಿರಂಗವಾಗಿ ಘೋಷಣೆ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ. ಎರಡು ವರ್ಷಗಳಲ್ಲಿ ಕರ್ನಾಟಕದ ಜನರಿಗೆ ಯಾವ ಭಾಗ್ಯ ನೀಡುತ್ತಾರೋ ಕಾದು ನೋಡಬೇಕು......

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Congress Government led by Chief Minister Siddaramaiah will completes 3 years in office on Friday, May 12, 2016.
Please Wait while comments are loading...