‘ನಮ್ಮ ರೈತರ ಬದುಕನ್ನು ಉಳಿಸುವುದು ನಮ್ಮ ತುರ್ತು ಕರ್ತವ್ಯವಾಗಿದೆ’
ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರೂ ಕನ್ನಡಿಗರಿಗೆ ನ್ಯಾಯ ಸಿಗುವುದಿಲ್ಲ, ಈ ವಿಚಾರದಲ್ಲಿ ಪದೇ ಪದೆ ಅನ್ಯಾಯ ಆಗುತ್ತೆ ಅನ್ನೋದು ಗಂಭೀರ ಆರೋಪ. ಹೀಗಿದ್ದಾಗ, ಕರ್ನಾಟಕದಿಂದ ಒಂದೇ ಪಕ್ಷದ 25 ಸಂಸದರು ಆಯ್ಕೆಯಾಗಿ ಹೋಗಿದ್ದಾರೆ. ಬಿಜೆಪಿ ಪಕ್ಷದ 25 ಸಂಸದರು ಲೋಕಸಭೆಗೆ ಕರ್ನಾಟಕದಿಂದ ಹೋಗಿದ್ರೂ, ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಅನ್ನೋ ಆರೋಪ ಕಾಂಗ್ರೆಸ್ ಪಕ್ಷದ್ದು. ಈ ಆರೋಪದ ಜತೆ ಈಗ ಮತ್ತೊಂದು ಆರೋಪದ ಬಾಂಬ್ ಸಿಡಿದಿದೆ.
ಹೌದು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಗರಂ ಆಗಿದ್ದರು. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಕನ್ನಡ ನಾಡಿನ ರೈತರಿಗೆ ಅನ್ಯಾಯ ಮಾಡ್ತಿದೆ ಅನ್ನೋ ಆರೋಪ. ಕರ್ನಾಟಕದಲ್ಲಿ ಬರ ಬಂದಿದ್ದರೂ ನರೇಂದ್ರ ಮೋದಿ ಅವರ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪ ಮಾಡಿದ್ರು ಸಿಎಂ ಸಿದ್ದರಾಮಯ್ಯ. ಹೀಗಾಗಿಯೇ, ಖುದ್ದು ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ನಾಡಿನ ರೈತರಿಗೆ ನೆರವು ನೀಡೋದಕ್ಕೆ ಮುಂದಾಗಿರುವ ಬಗ್ಗೆ ಘೋಷಣೆ ಮಾಡಿದ್ದರು. ಈಗ ಈ ವಿಚಾರ ಪ್ರಸ್ತಾಪ ಮಾಡಿ, ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದೆ ಕರ್ನಾಟಕ ಕಾಂಗ್ರೆಸ್.

'ನಯಾಪೈಸೆ ಬರ ಪರಿಹಾರ ನೀಡಿಲ್ಲ'
ಅಂದಹಾಗೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪವನ್ನೀಗ ಅಸ್ತ್ರ ಮಾಡಿಕೊಳ್ತಿದೆ ಕಾಂಗ್ರೆಸ್. ಹೀಗಂತ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಆರೋಪದ ನಡುವೆಯೇ ಕರ್ನಾಟಕ ಕಾಂಗ್ರೆಸ್, ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಕರ್ನಾಟಕ ಬರ ಸ್ಥಿತಿ ಪ್ರಸ್ತಾಪ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ 'ಕೇಂದ್ರದ ಬರ ಅಧ್ಯಯನ ತಂಡ ಬಂದು ಹೋಗಿದ್ದೂ ಆಯ್ತು, ಸಿಎಂ ಪತ್ರ ಬರೆದಿದ್ದೂ ಆಯ್ತು, ಕಂದಾಯ ಸಚಿವರು ಪತ್ರ ಬರೆದಿದ್ದು ಆಯ್ತು, ಇಷ್ಟೆಲ್ಲಾ ಆದರೂ ಒಕ್ಕೂಟ ಸರ್ಕಾರ ನಿಯಮದ ಪ್ರಕಾರ ಕರ್ನಾಟಕಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ.' ಎಂದಿದೆ.
ರೈತರಿಗೆ ₹2000 ನೀಡಲು ಕ್ರಮ!
ಹಾಗೇ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್, 'ಕೇಂದ್ರದ ಪರಿಹಾರ ಹಣ ಕಾಯುತ್ತ ಕೂರಲು ಸಾಧ್ಯವಿಲ್ಲ ಎಂಬ ಚಿಂತನೆಯಲ್ಲಿ ನಮ್ಮ ಸರ್ಕಾರ ಮೊದಲ ಕಂತಿನಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ₹2000 ನೀಡಲು ಕ್ರಮ ಕೈಗೊಂಡಿದೆ. ನಮ್ಮ ರೈತರ ಬದುಕನ್ನು ಉಳಿಸುವುದು ನಮ್ಮ ತುರ್ತು ಕರ್ತವ್ಯವಾಗಿದೆ.' ಎಂದು ಹೇಳುವ ಮೂಲಕ ಕರ್ನಾಟಕದ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಕುಟುಕಿದೆ.

ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದು ಏಕೆ?
ಸಿಎಂ ಸಿದ್ದರಾಮಯ್ಯ ನಿನ್ನೆ ವಾಗ್ದಾಳಿ ನಡೆಸಿ, ಸೆ. 21ರಂದು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರ ತಂಡ ಅಕ್ಟೋಬರ್ 4ರಿಂದ 9ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡ ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯ ನಷ್ಟ ಆಗಿದೆ. 4,663 ಕೋಟಿ ರೂಪಾಯಿ ಬೆಳೆ ನಷ್ಟದ ಪರಿಹಾರನ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ & ಗೃಹ ಸಚಿವರ ಖುದ್ದು ಭೇಟಿ ಮಾಡಲು ಸಮಯ ಕೊಡಿ ಎಂದು ಪತ್ರ ಬರೆದಿದ್ದೇವೆ. ಇವತ್ತಿನವರೆಗೂ ಸಮಯ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಫೈಟಿಂಗ್ ಏನೇ ಇರಲಿ, ಕರ್ನಾಟಕದ ರೈತರಿಗೆ ನ್ಯಾಯ ಸಮ್ಮತವಾಗಿ ಬರಬೇಕಿರುವ ಹಣ ಬರಲಿ. ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಪರಿಹಾರವ ಕೇಂದ್ರ ಸರ್ಕಾರ ನ್ಯಾಯಯುತವಾಗಿ ನೀಡಲಿ ಅನ್ನೋದೆ ಕನ್ನಡಿಗರ ಆಗ್ರಹ. ಈ ಕುರಿತಾಗಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆ ನಡೆಯುತ್ತಿದೆ. ನಿನ್ನೆಯಷ್ಟೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದನ್ನ ಇಲ್ಲಿ ಸ್ಮರಿಸಬಹುದು.












Click it and Unblock the Notifications