ಕಾಲೇಜು ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್ ಕಡ್ಡಾಯ ಬ್ಯಾನ್! ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯು ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳಿಗೆ ಕೇವಲ ಮನರಂಜನೆಯಾಗಿರದೆ ಜ್ಞಾನಾರ್ಜನೆಯ ವೇದಿಕೆಯಾಗಬೇಕು, ಜೊತೆಗೆ ಅವರ ಸುರಕ್ಷತೆಯೇ ಪ್ರಮುಖ ಗುರಿಯಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಪ್ರವಾಸದ ವೇಳೆ ಸಂಭವಿಸುತ್ತಿರುವ ಅನಾಹುತಗಳನ್ನು ತಡೆಗಟ್ಟಲು ಈ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ ಪ್ರವಾಸದ ವೇಳೆ ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದನ್ನ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಕುರಿತು ಸೆಪ್ಟೆಂಬರ್ 11ರಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿ ಪಾಲಿಸಬೇಕಾದ ನಿಯಮಗಳ ಸ್ಪಷ್ಟ ಪಟ್ಟಿಯನ್ನು ರವಾನಿಸಲಾಗಿದೆ.

Karnataka College Tour Rules Govt Bans Selfies amp amp Reels Caps Trips at 5 Days for Student Safety

ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ ಹಾಗೂ ರೀಲ್ಸ್ ನಿಷೇಧ

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಸೆಲ್ಫಿ ಮತ್ತು ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್ ಮಾಡುವ ಕ್ರೇಜ್ ಮಿತಿಮೀರುತ್ತಿದೆ. ಇದರಿಂದಾಗಿ ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯಲು ಹೋಗಿ ಪ್ರಾಣ ಕಳೆದುಕೊಳ್ಳುವ ಕಹಿ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆಯೋಜಿಸುವ ಯಾವುದೇ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಸೆಲ್ಫಿ ಕ್ಲಿಕ್ಕಿಸುವುದು ಮತ್ತು ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪ್ರವಾಸ ಆರಂಭಕ್ಕೂ ಮುನ್ನವೇ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಈ ಹೊಸ ನಿಯಮಗಳ ಬಗ್ಗೆ ಖುದ್ದಾಗಿ ಎಚ್ಚರಿಕೆ ಹಾಗೂ ಅರಿವು ಮೂಡಿಸಬೇಕು. ಅಲ್ಲದೆ, ಪ್ರವಾಸದ ಉದ್ದಕ್ಕೂ ಜೊತೆಗಿರುವ ಉಪನ್ಯಾಸಕರು ವಿದ್ಯಾರ್ಥಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.

ಐದು ದಿನಗಳಿಗೆ ಕಾಲೇಜು ಪ್ರವಾಸ ಸೀಮಿತ

ಹೊಸ ಮಾರ್ಗಸೂಚಿಗಳ ಅನ್ವಯ, ಪ್ರಯಾಣದ ದಿನಗಳನ್ನೂ ಒಳಗೊಂಡಂತೆ ಶೈಕ್ಷಣಿಕ ಪ್ರವಾಸದ ಒಟ್ಟು ಅವಧಿಯನ್ನ ಕೇವಲ ಐದು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪ್ರವಾಸವನ್ನು ಆಯೋಜಿಸುವ ಮುನ್ನ ಕಾಲೇಜು ಆಡಳಿತ ಮಂಡಳಿಯು ಕಾಲೇಜು ಶಿಕ್ಷಣ ಇಲಾಖೆಯಿಂದ ಲಿಖಿತ ಅನುಮತಿಯನ್ನ ಕಡ್ಡಾಯವಾಗಿ ಪಡೆಯಲೇಬೇಕು.

ಪ್ರವಾಸದ ಪ್ರಸ್ತಾವನೆಯೊಂದಿಗೆ ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ಹಾಗೂ ಪೋಷಕರ ಅಧಿಕೃತ ಸಮ್ಮತಿ ಪತ್ರವನ್ನ ಸಲ್ಲಿಸುವುದು ಕಡ್ಡಾಯ. ಒಮ್ಮೆ ಇಲಾಖೆಯಿಂದ ಪ್ರವಾಸದ ಪಟ್ಟಿಯನ್ನ ಅನುಮೋದಿಸಿದ ಬಳಿಕ, ಯಾವುದೇ ಕಾರಣಕ್ಕೂ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ.

ಪೂರ್ವಾನುಮತಿ ಪಡೆಯದ ಯಾವುದೇ ಹೊಸ ಸ್ಥಳಗಳಿಗೆ ಅಥವಾ ಮಾರ್ಗಮಧ್ಯೆ ಸಿಗುವ ಇತರೆ ಜಾಗಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಭಾರಿ ಮಳೆಯಿಂದಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ, ಮಳೆಗಾಲದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳದಿರಲು ಇಲಾಖೆ ಸಲಹೆ ನೀಡಿದೆ.

ಚಾರಣ, ಈಜುಕೊಳ ಭೇಟಿಗೆ ಪ್ರಮಾಣೀಕೃತ ತಜ್ಞರ ಅಗತ್ಯ

ನದಿ, ಸಮುದ್ರ, ಜಲಪಾತ, ದಟ್ಟವಾದ ಕಾಡುಗಳು ಮತ್ತು ಕಡಿದಾದ ಬೆಟ್ಟಗಳಂತಹ ಅಪಾಯಕಾರಿ ತಾಣಗಳನ್ನ ಒಳಗೊಂಡ ಪ್ರವಾಸಗಳಿಗೆ ಹೆಚ್ಚುವರಿ ಹಾಗೂ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಅನುಮೋದಿತ ಪ್ರವಾಸದ ಪಟ್ಟಿಯಲ್ಲಿ ಟ್ರೆಕ್ಕಿಂಗ್ ಅಥವಾ ಸ್ವಿಮ್ಮಿಂಗ್ ಸೇರಿದ್ದರೆ, ಪ್ರಮಾಣೀಕೃತ ತಜ್ಞರು (Certified Experts) ಪ್ರವಾಸದ ತಂಡದಲ್ಲಿ ಇರುವುದು ಅತ್ಯಗತ್ಯ.

ಅಲ್ಲದೆ, ಇಂತಹ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವ ಮುನ್ನ ಸ್ಥಳೀಯ ಆಡಳಿತದಿಂದ ಭದ್ರತಾ ಹಾಗೂ ಸುರಕ್ಷತಾ ಅನುಮತಿಯನ್ನ ಮೊದಲೇ ಪಡೆದಿರಬೇಕು. ಇಂತಹ ಸ್ಥಳಗಳಲ್ಲಿ ಮುಂಚಿತವಾಗಿಯೇ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನ ಮಾಡಿಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಸ್ಥಳೀಯ ಪೊಲೀಸರಿಗೆ ಮಾಹಿತಿ

ಶೈಕ್ಷಣಿಕ ಪ್ರವಾಸದ ಬಗ್ಗೆ ಭೇಟಿ ನೀಡುವ ಸ್ಥಳದ ಹತ್ತಿರದ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯ ನಿಯಮವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸದ ಸಮಗ್ರ ವಿವರಗಳು ಹಾಗೂ ಭೇಟಿ ನೀಡುವ ಸ್ಥಳಗಳ ಪಟ್ಟಿಯನ್ನ ಪೊಲೀಸರಿಗೆ ಒದಗಿಸಬೇಕು. ಪ್ರತಿಯೊಂದು ಪ್ರವಾಸದಲ್ಲೂ ಕನಿಷ್ಠ ಒಬ್ಬರಾದರೂ ಕಾಯಂ ಉಪನ್ಯಾಸಕರು ಇರಲೇಬೇಕು.

ಕೇವಲ ಅತಿಥಿ ಉಪನ್ಯಾಸಕರ ಉಸ್ತುವಾರಿಯಲ್ಲಿ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಇನ್ನು ಪ್ರವಾಸದ ಜೊತೆಗಿರುವ ಬೋಧಕ ಸಿಬ್ಬಂದಿಯ ಒಟ್ಟು ಸಂಖ್ಯೆಯನ್ನ ನಾಲ್ಕಕ್ಕೆ ಸೀಮಿತಗೊಳಿಸಲಾಗಿದ್ದು, ಈ ತಂಡದಲ್ಲಿ ಇಬ್ಬರು ಮಹಿಳಾ ಉಪನ್ಯಾಸಕರು ಮತ್ತು ಒಬ್ಬರು 'ಗ್ರೂಪ್ ಡಿ' ನೌಕರರು ಇರುವುದು ಕಡ್ಡಾಯವಾಗಿದೆ.

ವಿಶೇಷವಾಗಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದರೆ ಜೊತೆಗಿರುವ ಉಪನ್ಯಾಸಕರು ಹಾಗೂ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+