ಆಡಳಿತದಲ್ಲಿ ಕನ್ನಡ ಪಾಲನೆಯಾಗದಿರಲು ನಿರ್ಲಕ್ಷ್ಯವೇ ಕಾರಣ!
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಮಾತನಾಡುವಂತಹ ವಾತಾವರಣವು ಸೇರಿ ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಅಗತ್ಯವಿದೆ ಅಂತಾ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು. ಅರೆ ಸಿಎಂ ದಿಢೀರ್ ಹೀಗೆ ಹೇಳಿದ್ದು ಏಕೆ? ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೆ ಮತ್ತೆ ಹೊಸ ನಿಯಮ ಬರುತ್ತಿದೆಯಾ ಅಂದ್ರಾ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಅಷ್ಟಕ್ಕೂ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೊಜಿಸಿದ್ದ. 'ಕರ್ನಾಟಕ ಸಂಭ್ರಮ 50' ರ ಲಾಂಛನವನ್ನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಸಮಾರಂಭದಲ್ಲಿ ಮಾತನಾಡಿದರು. ಹಾಗೂ ಇದೇ ವೇಳೆ, ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ಅಗತ್ಯ ಇರುವ ಅಂಶಗಳನ್ನು ಕೂಡ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದರು.

ನಾವೆಲ್ಲ ಕನ್ನಡಿಗರು, ಕರ್ನಾಟಕದ ಏಕೀಕರಣ ಆದಾಗಿನಿಂದ ವಿವಿಧ ಭಾಷೆ ಮಾತನಾಡುವ ಜನ ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ. ಈ ನಾಡಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡಲು ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ ಉತ್ತರ ಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯ ಇಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಮತ್ತು ಅಕ್ಕಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ಸಿಎಂ ತಿಳಿಸಿದರು.
ಕನ್ನಡಿಗರು ಕನ್ನಡವನ್ನು ಮೊದಲು ಪ್ರೀತಿಸಲಿ
ಕರ್ನಾಟಕ ಏಕೀಕರಣವಾಗಿ 68 ವರ್ಷ ಕಳೆದರೂ, ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದೆ ಇರುವುದು ಸರಿ ಅಲ್ಲ. ಕನ್ನಡಿಗರು ನಮ್ಮ ಭಾಷೆ ಬೇರೆಯವರಿಗು ಕಲಿಸುವ ಬದಲಾಗಿ, ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ಗುಣ ಭಾಷಾ ಬೆಳವಣಿಗೆ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು ಸಿಎಂ. ರಾಜ್ಯದ ಕೆಲ ಭಾಗಗಳಲ್ಲಿ ಪರಭಾಷಿಗರು ಕನ್ನಡ ಮಾತನಾಡುವುದೆ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದ ಈ ರೀತಿ ಆಗಿದೆ. ಬೇರೆ ಭಾಷಿಗರನ್ನ, ಧರ್ಮದವರನ್ನೂ ಪ್ರೀತಿಸಬೇಕು ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕನ್ನಡ ಪಾಲನೆಯಾಗದಿರಲು ನಿರ್ಲಕ್ಷ್ಯ ಕಾರಣ
ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲೀಷ್ ನಲ್ಲಿಯೇ ಟಿಪ್ಪಣಿ ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ & ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲೀಷ್ ಬಳಸಬಹುದೆ ಹೊರತು ಇನ್ನುಳಿದಂತೆ ಕನ್ನಡದಲ್ಲೇ ವ್ಯವಹರಿಸಬೇಕು. ಬಹಳ ವರ್ಷದಿಂದ, ಕನ್ನಡ ಆಡಳಿತ ಭಾಷೆ ಆಗಿದ್ದರೂ ಇದು ಪಾಲನೆ ಆಗದಿರುವುದಕ್ಕೆ ನಿರ್ಲಕ್ಷ್ಯ ಕೂಡ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು. 1983ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. 2023 ನವೆಂಬರ್ 1 ರಿಂದ ಒಂದು ವರ್ಷ ಕರ್ನಾಟಕ ಸಂಭ್ರಮವನ್ನು ಆಚರಿಸುವ ಮೂಲಕ , ಜನರಲ್ಲಿ ಕನ್ನಡ ಭಾಷಾ ಜಾಗೃತಿ ಮೂಡಿಸಲಿದೆ ಎಂದು ಸಿಎಂ ತಿಳಿಸಿದರು.

ಕರ್ನಾಟಕ ಎಂದು ಮರುನಾಮಕರಣ
ಏಕೀಕರಣವಾಗಿ ಕರ್ನಾಟಕ ರಚನೆಯಾಗಿದ್ದು 1956 ನವೆಂಬರ್ 1ರಂದು. ಆದ್ರೆ ಕರ್ನಾಟಕ ಏಕೀಕರಣಕ್ಕೂ ಮುನ್ನ ಅನೇಕ ರಾಜ್ಯಗಳಲ್ಲಿ ನಾಡು ಹರಿದು ಹಂಚಿಹೋಗಿತ್ತು. ಭಾಷಾವಾರು ಪ್ರಾಂತ್ಯ ವಿಂಗಡನೆ ಘೋಷಣೆಯಾದ ಮೇಲೆ ಕರ್ನಾಟಕ ಏಕೀಕರಣ ಆಗಬೇಕೆಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಅನೇಕರು ಏಕೀಕರಣಕ್ಕಾಗಿ ಹೋರಾಟ ಮಾಡಿದರು. ಅಲ್ಲದೆ ಸಾಂಪ್ರದಾಯಿಕ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದರೂ ಮೈಸೂರು ರಾಜ್ಯವೆಂದೇ ಕರೆಯಲಾಗುತ್ತಿತ್ತು.
ಮೈಸೂರು ರಾಜವಂಶಸ್ಥರು ಆಳಿದ್ದರಿಂದ ಆ ಹೆಸರಿತ್ತು. ವಿಶಾಲ ಕರ್ನಾಟಕವಾದ ನಂತರ ಮುಂಬೈ ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಹಲವು ಪ್ರದೇಶಗಳು ಒಗ್ಗೂಡಿ ಕರ್ನಾಟಕವಾಯಿತು. ದೇವರಾಜ ಅರಸು ಅವ್ರು ಸಿಎಂ ಆದ ಸಮಯದಲ್ಲಿ 1973 ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣ ಆಯಿತು. ಕರ್ನಾಟಕದ ಗತವೈಭವ ಎಂಬ ಆಲೂರು ವೆಂಕಟರಾಯರ ಪುಸಕ್ತದಿಂದ ಆಯ್ದು ಅಖಂಡ ಕರ್ನಾಟಕಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಸಿಎಂ ವಿವರಿಸಿದರು.
ಹಿಂದಿನ ಸರ್ಕಾರ ಆಚರಿಸಬೇಕಿತ್ತು
ನವೆಂಬರ್ 01, 2023ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದ್ರೆ ಹಿಂದಿನ ಸರ್ಕಾರ ಮಾಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಗರಂ ಆದರು. ಈ ಬಾರಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಟನೆ. ಇದನ್ನ ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ತನಕ ವರ್ಷ ಪೂರ್ತಿ ಕರ್ನಾಟಕ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.

ಅಲ್ಲದೆ ಕರ್ನಾಟಕ ಸಂಭ್ರಮ-50 ಲಾಂಛನ ಇಂದು ಬಿಡುಗಡೆ ಮಾಡಿದ್ದು, ಅಲ್ಲದೆ ಅದನ್ನ ವಿನ್ಯಾಸಗೊಳಿಸಿದ ರವಿರಾಜ್.ಜಿ.ಹುಲಗೂರು ಅವರನ್ನು ಅಭಿನಂದಿಸಿದರು. ಲಾಂಚನದ ವಿನ್ಯಾಸ ಉತ್ತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂಲಕ ಕನ್ನಡಿಗರು ಒಂದು ವರ್ಷ ಪೂರ್ತಿ ಕನ್ನಡಿಗರ ಸಂಸ್ಕೃತಿಯ ಸಂಭ್ರಮಕ್ಕಾಗಿ ಸಜ್ಜಾಗಿದ್ದಾರೆ.
ಹಳ್ಳಿ ಹಳ್ಳಿಯಲ್ಲೂ ಮೊಳಗಲಿ ಕನ್ನಡ
ಇದೇ ಸಮಾರಂಭದಲ್ಲಿ ಮಾತ್ನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಲಾಂಛನ ರೂವಾರಿಗೆ ಬಹುಮಾನ ಘೋಷಿಸಿದ್ದರು. ಅಲ್ಲದೆ ಇಡೀ ವರ್ಷ ಈ ಸಂಭ್ರಮಾಚರಣೆ ಮಾಡಬೆಕು ಎಂದು ನಿರ್ಧರಿಸಿದ್ದೇವೆ. ಇದು ಸರ್ಕಾರದ ಕಾರ್ಯಕ್ರಮದ ಜೊತೆಗೆ ಜನರ ಕಾರ್ಯಕ್ರಮ ಆಗಬೇಕು. ಬೆಳಗಾವಿಯಿಂದ ಚಾಮರಾಜನಗರ ತನಕ ರಾಜ್ಯದಲ್ಲಿ ಪ್ರತಿ ಹಳ್ಳಿಯಲ್ಲೂ ಯುವ ಪೀಳಿಗೆ ಈ ಸಂಭ್ರಮ ಆಚರಿಸಬೇಕು. ಅಲ್ಲದೆ ನ. 1 ರಿಂದ ಈ ಸಂಭ್ರಮಾಚರಣೆ ಮಾಡಲು ತೀರ್ಮಾನ ಮಾಡಲಾಗಿದ್ದು, ನಾವೆಲ್ಲ ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದರ ಜತೆ ಬಹುಮಾನದ ಮೊತ್ತವನ್ನು ಕೂಡ ಬಿಬಿಎಂಪಿ ಕಡೆಯಿಂದ ಮತ್ತಷ್ಟು ಹೆಚ್ಚಿಸಿದ್ದರು.
1 ಲಕ್ಷ ರೂಪಾಯಿ ಬಹುಮಾನ!
ಇನ್ನು, ವಿಶೇಷ ಲಾಂಛನ ರೂಪಿಸಿದ ಹುಡುಗನಿಗೆ ಸಚಿವರು 25 ಸಾವಿರ ಬಹುಮಾನ ಮೊತ್ತ ಘೋಷಿಸಿದ್ದಾರೆ. ಆದರೆ 25 ಸಾವಿರದ ಕಾಲ ಹೋಯಿತು. ಹೀಗಾಗಿಯೇ ಪಾಲಿಕೆ ವತಿಯಿಂದ ನಾವು 1 ಲಕ್ಷವನ್ನ ಬಹುಮಾನವಾಗಿ ನೀಡ್ತೇವೆ. ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕು. ಈ ವರ್ಷ ರಾಜ್ಯಕ್ಕೆ ಉತ್ತಮವಾಗಿ ಮಳೆ ಬೆಳೆ ಆಗಿ, ಎಲ್ಲರೂ ನೆಮ್ಮದಿಯಾಗಿ ಬದುಕುವಂತಾಗಲಿ ಎಂದು ನಾನು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇದೇ ಕಾರ್ಯಕ್ರಮದಲ್ಲಿ ತಿಳಿಸಿದ್ದರು.












Click it and Unblock the Notifications