ರಾಜ್ಯ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗದ ಮಧ್ಯಂತರ ವರದಿ ಕೇಳಿದ ಬೊಮ್ಮಾಯಿ- ವರದಿ, ವಿವರ
7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಚ್ ಒಳಗೆ ಮಧ್ಯಂತರ ವರದಿಯನ್ನು ಕೇಳುವುದಾಗಿ ಸಿಎಂ ಹೇಳಿದ್ದಾರೆ. ಈ ವರದಿ ಓದಿ
ಬೆಂಗಳೂರು, ಫೆಬ್ರವರಿ 24: ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಉದ್ದೇಶಿಸಿರುವ ರಾಜ್ಯ ಸರ್ಕಾರಿ ನೌಕರರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಈ ಮೂಲಕ 7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಚ್ ಒಳಗೆ ಮಧ್ಯಂತರ ವರದಿಯನ್ನು ಕೇಳುವುದಾಗಿ ಸಿಎಂ ಹೇಳಿದ್ದಾರೆ.
ಈ ವಿಚಾರವಾಗಿ ಗುರುವಾರ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, '7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಧಾಕರ್ ರಾವ್ ನೇತೃತ್ವದ ವೇತನ ಆಯೋಗದ ಮಧ್ಯಂತರ ವರದಿಯನ್ನು ಕೇಳಲಿದ್ದೇನೆ. ಈ ವರದಿ ಸಲ್ಲಿಕೆಯಾದ ಬಳಿಕ ಅದರ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ' ಎಂದು ತಿಳಿಸಿದ್ದಾರೆ.

7ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲು ರಾಜ್ಯ ಸರಕಾರಿ ನೌಕರರು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧೀನದಲ್ಲಿರುವ ಸಿಬ್ಬಂದಿ ಇತ್ತೀಚೆಗೆ ತಮ್ಮ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಕೋರಿ 65 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.
ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದ ನಿಯೋಗವು, ತನ್ನ ವರದಿಯಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಅವರ ಮಕ್ಕಳಿಗೆ ಪ್ರೋತ್ಸಾಹಧನ ಮತ್ತು ಶಿಕ್ಷಣ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಸರ್ಕಾರ ಆಯೋಗ ರಚಿಸಿದೆ.
ಮಹಿಳಾ ರೈತ ಕಾರ್ಮಿಕರಿಗೆ ಮಾಸಿಕ ನೆರವು ದ್ವಿಗುಣ
ಗೃಹಿಣಿ ಶಕ್ತಿ ಯೋಜನೆಯಡಿ ಭೂರಹಿತ ರೈತ ಕಾರ್ಮಿಕರಿಗೆ ನೀಡುತ್ತಿರುವ ಮಾಸಿಕ 500 ರೂ.ಗಳಿಂದ 1000 ರೂ. ಗೆ ಹೆಚ್ಚಿಸುವುದಾಗಿ ಸಿಎಂ ಬೊಮ್ಮಾಯಿ ಸದನಕ್ಕೆ ತಿಳಿಸಿದರು.

'ಭೂಮಿಯನ್ನು ಉಳುಮೆ ಮಾಡುವ ರೈತ ಕಾರ್ಮಿಕರು ತಮ್ಮ ಆರೋಗ್ಯ ಮತ್ತು ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳಬೇಕಿದೆ. ಅವರಿಗೆ ವರ್ಷಪೂರ್ತಿ ಉದ್ಯೋಗಗಳು ದೊರೆಯುವುದಿಲ್ಲ. ನಾವು ಕಳೆದ 3-4 ದಿನಗಳಿಂದ ಈ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಅಂತಿಮವಾಗಿ ಅದನ್ನು ತಿಂಗಳಿಗೆ 1,000 ಹೆಚ್ಚಿಸಲು ನಿರ್ಧರಿಸಿದ್ದೇವೆ' ಎಂದು ಅವರು ಹೇಳಿದರು.
ಕನ್ನಡ ಭಾಷಾ ಮಸೂದೆ ಅಂಗೀಕಾರ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಅವರು ಮಂಡಿಸಿದ ಮಸೂದೆಯ ಪ್ರಾಥಮಿಕ ಉದ್ದೇಶವು ಉನ್ನತ ಶಿಕ್ಷಣ ಮತ್ತು ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವುದಾಗಿದೆ. ಆ ಮೂಲಕ ಕನ್ನಡಕ್ಕೆ ಆದ್ಯತೆ ನೀಡಲು ಚಿಂತಿಸಿದೆ.

ಮಸೂದೆಯ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಜಿಲ್ಲಾ ಮಟ್ಟದ ಜಾರಿ ಸಮಿತಿಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಜಾರಿ ಸಮಿತಿಯನ್ನು ಸ್ಥಾಪಿಸಲಾಗುತ್ತದೆ. ರಾಜ್ಯ ಮಟ್ಟದ ಜಾರಿ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳನ್ನು ಸೇರಿಸಲು ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಇದನ್ನು ಸೆಪ್ಟೆಂಬರ್ 22, 2022 ರಂದು ವಿಧಾನಸಭೆಯಲ್ಲಿ ಪರಿಚಯಿಸಲಾಗಿದೆ.
ಬಿಎಂಎಸ್ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರ
ಇತ್ತೀಚೆಗಷ್ಟೇ ವಿವಾದಕ್ಕೆ ಕಾರಣವಾಗಿದ್ದ ಬಿಎಂಎಸ್ ವಿಶ್ವವಿದ್ಯಾನಿಲಯ ವಿಧೇಯಕ ಗುರುವಾರ ಜೆಡಿ(ಎಸ್) ಸದಸ್ಯರ ಪ್ರತಿಭಟನೆಯ ನಡುವೆಯೇ ಅಂಗೀಕಾರಗೊಂಡಿದೆ. ಇದು ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡಲಿದೆ.
ಬೆಂಗಳೂರಿನ ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ಖಾಸಗಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮುಂದೆ ಬಂದಿದೆ. ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಮಸೂದೆ ಹೇಳಿದೆ. ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ್ ನಾರಾಯಣ ಅವರು ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.
10,000 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಲು ಸಾರ್ವಜನಿಕ ಟ್ರಸ್ಟ್ ಆಗಿರುವ ಬಿಎಂಎಸ್ ಟ್ರಸ್ಟ್ ಅನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.












Click it and Unblock the Notifications