Caste Census: ಜಾತಿ ಗಣತಿ: "ಇನ್ನೆಷ್ಟು ವಿಭಜನೆ ಮಾಡಲು ಇಚ್ಛಿಸುತ್ತೀರಿ?"
Caste Census: ಕರ್ನಾಟಕ ಸರ್ಕಾರದ ಜಾತಿ ಗಣತಿಯ ವಿಷಯಕ್ಕೆ ಲಿಂಗಾಯತ ಸಮುದಾಯವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಸರ್ಕಾರದ ಜಾತಿ ಗಣತಿ ಚರ್ಚೆಗೆ ವಿರೋಧ ಪಕ್ಷಗಳು ಸಹ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬಿಜೆಪಿಯ ಜನಾಕ್ರೋಶ ಯಾತ್ರೆಯ ವಿಷಯವನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಜಾತಿ ಗಣತಿ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದೆ ಎಂದು ದೂರಿದೆ. ಈ ನಡುವೆ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳಿಂದ ಜಾತಿ ಗಣತಿ ವಿಚಾರವಾಗಿ ತೀವ್ರ ಆಕ್ಷೇಪಣೆ ವ್ಯಕ್ತವಾಗಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಪರ - ವಿರೋಧ ಚರ್ಚೆ ಶುರುವಾಗಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ Veerashaiva Lingayath Official ಎನ್ನುವ ಪುಟದಿಂದ ಟ್ವೀಟ್ ಮಾಡಲಾಗಿದ್ದು. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಸಚಿವ ಸಂಪುಟದ ಎದುರು ಇಟ್ಟಿರುವ ಜಾತಿ ಗಣತಿಯ ವರದಿ ಪ್ರಕಾರ ಲಿಂಗಾಯತ 66 ಲಕ್ಷ ಮತ್ತು ವೀರಶೈವ ಲಿಂಗಾಯಿತ 10 ಲಕ್ಷ ಎಂದು ಪ್ರತ್ಯೇಕವಾಗಿ ಸಂಖ್ಯೆ ತೋರಿಸಿದ್ದೀರಿ. ಇನ್ನು ಲಿಂಗಾಯತ ಉಪಪಂಗಡಗಳಾದ ಲಿಂಗಾಯತ ಸಾದರ 25 ಲಕ್ಷ, ಲಿಂಗಾಯತ ಪಂಚಮಸಾಲಿ 10 ಲಕ್ಷ, ಬಣಜಿಗ 10 ಲಕ್ಷ, ಗಾಣಿಗ 7 ಲಕ್ಷ, ಉಪ್ಪಾರ 8 ಲಕ್ಷ, ಸೇರಿದಂತೆ ಕುಂಬಾರ, ಹೂಗಾರ, ಸಾದರ, ಕುಡಕ್ಕಲಿಗ ಎಲ್ಲವುಗಳನ್ನು ಪ್ರತ್ಯೇಕವಾಗಿ ಮಾಡಿದ್ದೀರಿ ಎಂದು ಹೇಳಲಾಗಿದೆ.

ಮುಂದುವರಿದು ಅಷ್ಟೇ ಅಲ್ಲದೆ ಲಿಂಗಾಯತ ಉಪ ಪಂಗಡಗಳಲ್ಲಿ ಪ್ರಬಲವಾಗಿರುವ ಲಿಂಗಾಯತ ರೆಡ್ಡಿಗಳನ್ನು ಕೇವಲ ರೆಡ್ಡಿಗಳೆಂದು ಪರಿಗಣಿಸುವ ಮೂಲಕ ಲಿಂಗಾಯತರಿಂದ ಬೇರ್ಪಡಿಸಿದ್ದೀರಿ. ಇದಕ್ಕೆ ನಿಮ್ಮದೇ ಸಚಿವ ಸಂಪುಟದ ಸಹೋದ್ಯೋಗಿ ಶರಣಬಸಪ್ಪ ದರ್ಶನಪುರವರ ಸಮ್ಮತಿ ಇದೆಯೇ? ಒಂದು ವೇಳೆ ಸಮ್ಮತಿ ಇದ್ದರೆ ಅವರು ಲಿಂಗಾಯಿತರ ಅಲ್ಲ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಲಾಗಿದೆ.
ಶಾಸಕರಾದ ಬಸವರಾಜ ರಾಯರೆಡ್ಡಿ, ಜಿ.ಎಸ್ ಪಾಟೀಲ್, ಅಪ್ಪಾಜಿ ನಾಡಗೌಡ, ಎಸ್ ಆರ್ ಪಾಟೀಲ್, ಜೆ ಟಿ ಪಾಟೀಲ್ ಸೇರಿದಂತೆ ಅನೇಕರು ಸಿದ್ದರಾಮಯ್ಯನವರ ಪ್ರಕಾರ ಲಿಂಗಾಯಿತರಲ್ಲ, ಅವರು ಕೇವಲ ಆಂಧ್ರದ ರೆಡ್ಡಿಗಳು. ಇನ್ನು ನೇಕಾರ ಲಿಂಗಾಯಿತರ ಕಥೆಯು ಹೀಗೆ ಇದೆ. ಇನ್ನೆಷ್ಟು ವಿಭಜನೆ ಮಾಡಲು ಇಚ್ಚಿಸುತ್ತೀರಾ? ನಿಮ್ಮದೇ ಈ ಅವೈಜ್ಞಾನಿಕ ವರದಿಯ ಮೂಲಕ ಲಿಂಗಾಯತ ಎಲ್ಲ ಉಪ ಪಂಗಡಗಳನ್ನು ಸೇರಿಸಿದರೆ ಎರಡು ಕೋಟಿಗೂ ಅಧಿಕ ಜನಸಂಖ್ಯೆಯಾಗುತ್ತಿದೆ. ಇನ್ನು ವೈಜ್ಞಾನಿಕವಾಗಿ ಎಲ್ಲರ ಮನೆಗಳಿಗೂ ತೆರಳಿ ಸಮೀಕ್ಷೆ ನಡೆಸಿದರೆ ನಿಜವಾಗಲೂ ಲಿಂಗಾಯತರು ಎರಡುವರೆ ಕೋಟಿ ಇಂದ ಮೂರು ಕೋಟಿ ವರೆಗೂ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಲಾಗಿದೆ.
ಮೀಸಲಾತಿ ಕಾರಣಗಳಿಂದ ಲಿಂಗಾಯತ ರೆಡ್ಡಿಗಳು ಕೆಟಗರಿ 3ಎ ಅಡಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಗಾಣಿಗ, ಬಣಜಿಗ, ಮಡಿವಾಳ, ನೇಕಾರ ಸಮುದಾಯಗಳು 2ಎ ಮೀಸಲಾತಿಯಲ್ಲಿ ಗುರುತಿಸಿಕೊಂಡ ಮಾತ್ರಕ್ಕೆ ಅವರು ಲಿಂಗಾಯಿತರಲ್ಲವೇ? ಹಾಗಿದ್ದರೆ ಬಣಜಿಗ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್, ಗಾಣಿಗ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಮತ್ತು ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಸಾದರ ಲಿಂಗಾಯತ ಉಪಪಂಗಡದ ಶಾಮನೂರು ಶಿವಶಂಕರಪ್ಪನವರು ನಿಮ್ಮ ಪ್ರಕಾರ ಲಿಂಗಾಯತರಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಲಾಗಿದೆ.












Click it and Unblock the Notifications