ಗ್ರಾಮೀಣ ಮಹಿಳೆಯರಿಗೆ ಗುಡ್‌ ನ್ಯೂಸ್‌: ಹಸು, ಎಮ್ಮೆ ಖರೀದಿಗೆ ಸಬ್ಸಿಡಿ; ಸಂಪುಟ ತೀರ್ಮಾನ

ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಒಟ್ಟು 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಶೇ.25ರಷ್ಟು ಸರ್ಕಾರಿ ಸಹಾಯಧನ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Karnataka Cabinet Subsidy for Rural women in Belagavi and Kalaburagi divisions to Buy Cows Buffaloes

2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

Karnataka Cabinet: ಯಾರಿಗೆ ಆದ್ಯತೆ?

ಯೋಜನೆಯಡಿ ದೇವದಾಸಿಯರು, ವಿಧವೆಯರು, ತೃತೀಯ ಲಿಂಗದವರು, ಜೀವನಾಧಾರವಿಲ್ಲದೆ ಸಂಕಷ್ಟದಲ್ಲಿರುವವರು, ಪರಿತ್ಯಕ್ತೆಯರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಅಲ್ಲದೆ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಭೂ ರಹಿತ ಮಹಿಳಾ ಕಾರ್ಮಿಕರಿಗೂ ಈ ಯೋಜನೆಯಿಂದ ಸ್ವಯಂ ಉದ್ಯೋಗದ ಅವಕಾಶ ದೊರೆಯಲಿದೆ.

Karnataka Cabinet: ಒಟ್ಟು ₹18 ಕೋಟಿ ಅನುದಾನ

ಯೋಜನೆಯ ಒಟ್ಟು ವೆಚ್ಚ ₹18.00 ಕೋಟಿಗಳಾಗಿದ್ದು, ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ ₹9.00 ಕೋಟಿ ಹಾಗೂ ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ ₹9.00 ಕೋಟಿ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿರುವ ಸಚಿವರು ಪ್ರತಿಯೊಬ್ಬ ಅರ್ಹ ಮಹಿಳಾ ಫಲಾನುಭವಿಗೆ ತಲಾ ₹18,750/- ಗಳಂತೆ ಶೇ. 25ರಷ್ಟು ಸರ್ಕಾರಿ ಸಹಾಯಧನ ಸಿಗಲಿದೆ ಎಂದಿದ್ದಾರೆ.

Karnataka Cabinet: ಕುಟುಂಬಕ್ಕೆ ನಿರಂತರ ಆದಾಯದ ಗುರಿ

ಹೈನುಗಾರಿಕೆಯನ್ನು ಸ್ವಯಂ ಉದ್ಯೋಗವಾಗಿ ಉತ್ತೇಜಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ಜಾನುವಾರು ಸಾಕಾಣಿಕೆಯಿಂದ ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಕುಟುಂಬಗಳಿಗೆ ನಿರಂತರ ಆದಾಯದ ಮೂಲ ಸೃಷ್ಟಿಯಾಗಲಿದೆ.

ಅದರೊಂದಿಗೆ ಗ್ರಾಮೀಣ ಕುಟುಂಬಗಳ ಪೌಷ್ಟಿಕಾಂಶ ಭದ್ರತೆ ಸುಧಾರಿಸಲು ಕೂಡ ಈ ಯೋಜನೆ ನೆರವಾಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿವರಿಸಿದ್ದಾರೆ. ಉತ್ತರ ಕರ್ನಾಟಕದ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೆ ಯೋಜನೆ ಸಹಕಾರಿಯಾಗುವ ನಿರೀಕ್ಷೆಯಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಮೈಕ್ರೋ ಯೋಜನೆಯಡಿ ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿ ₹3,791.33 ಲಕ್ಷ (₹37.91 ಕೋಟಿ) ಅಂದಾಜು ವೆಚ್ಚದ 3 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಮೈಕ್ರೋ ಯೋಜನೆಯಡಿ ಈ ಮೊತ್ತವನ್ನು ಸಂಪೂರ್ಣವಾಗಿ ಭರಿಸಲಾಗುವುದಲ್ಲದೆ ಲೋಕೋಪಯೋಗಿ ಇಲಾಖೆಯ (PWD) ಮೂಲಕ ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಚಿಂಚೋಳಿ/ಚಿಂಚೋರಾ ಗ್ರಾಮದ ಸಮೀಪವಿರುವ ಪ್ರಮುಖ ಸಕ್ಕರೆ ಕಾರ್ಖಾನೆಯಾದ 'ಕೆಪಿಆರ್ ಶುಗರ್ಸ್' ರಸ್ತೆಯ ಪಕ್ಕದಲ್ಲಿರುವುದರಿಂದ, ಈ ರಸ್ತೆಗಳ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನೆರೆಹೊರೆಯ ತಾಲೂಕುಗಳಲ್ಲಿ ಬೆಳೆದ ಕಬ್ಬನ್ನು ಸುಲಭವಾಗಿ ಕಾರ್ಖಾನೆಗೆ ಸಾಗಿಸಲು ಅನುಕೂಲವಾಗಲಿದೆ. ಈ ಕಾಮಗಾರಿಗಳಿಂದ ಅಫ್ಜಲಪುರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರ ಸಾರಿಗೆ ಸಂಪರ್ಕ ಸುಧಾರಿಸಿ, ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಉತ್ತೇಜನಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+