ಮೈಸೂರು ವಿಮಾನ ನಿಲ್ದಾಣಕ್ಕೆ 240 ಎಕರೆ ಭೂಮಿ, ಶಾಲಾ ಮಕ್ಕಳ ಶೂ ಖರೀದಿಗೆ ಗ್ರೀನ್ ಸಿಗ್ನಲ್!
ಬೆಂಗಳೂರು, ಜು. 22: ಅರಮನೆ ನಗರಿ ಮೈಸೂರಿನಲ್ಲಿ ಬೃಹತ್ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಮೈಸೂರಿನ ವಿಮಾನ ನಿಲ್ದಾಣಕ್ಕೆ 250 ಎಕರೆ ಭೂಮಿಯನ್ನು ಹಸ್ತಾಂತರಿಸಲು ಶುಕ್ರವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೇ, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವರಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಲು ಸಹ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ 240 ಎಕರೆ ಜಮೀನು ಹಸ್ತಾಂತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದರ ಜತೆಗೆ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
2022-23ನೇ ಸಾಲಿನ ರಸಗೊಬ್ಬರ ಕಾಪು ದಾಸ್ತಾನು ಮಾಡುವ ಯೋಜನೆಗೆ ಆರ್ಥಿಕ ನೆರವು ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ರಸಗೊಬ್ಬರ ದಾಸ್ತಾನಿಗಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ತಲಾ ರೂ. 200 ಕೋಟಿಗಳ ದುಡಿಯುವ ಬಂಡವಾಳ ಸಾಲಕ್ಕೆ ರಾಜ್ಯ ಸರ್ಕಾರದ ಖಾತ್ರಿ ನೀಡಿದೆ.

20 ಕೋಟಿ ವೆಚ್ಚದಲ್ಲಿ ಬೃಹತ್ ಆಸ್ಪತ್ರೆ ನಿರ್ಮಾಣ:
ಬಳ್ಳಾರಿ ಜಿಲ್ಲೆಯ ಕುರಗೋಡು ಪಟ್ಟಣದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರ ಜತೆಗೆ ಬಳ್ಳಾರಿ ಖನಿಜ ಪ್ರತಿಷ್ಠಾನ ಟ್ರಸ್ಟ್ ಕ್ರಿಯಾ ಯೋಜನೆಗೂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇದರ ಜತೆಯಲ್ಲಿಯೇ ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2002-27 ಕ್ಕೆ ಅನುಮೋದನೆ ನೀಡಿದೆ.

132 ಕೋಟಿ ರೂ. ವೆಚ್ಚಕ್ಕೆ ಘಟನೋತ್ತರ ಅನುಮೋದನೆ:
ರಾಜ್ಯದಲ್ಲಿ 2022 - 23 ನೇ ಸಾಲಿನ 1 ರಿಂದ 10 ನೇ ತರಗತಿ ವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್ ವಿತರಣೆಗೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. ರೂ. 132.00 ಕೋಟಿ ಅನುದಾನದಲ್ಲಿ ಶೂ ಸಾಕ್ಸ್ ಸ್ಯಾಂಡಲ್ ವಿತರಿಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಿದ್ದು, ಶಾಲಾ ಆಡಳಿತ ಮಂಡಳಿಯವರೇ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಒಬ್ಬ ವಿದ್ಯಾರ್ಥಿಗೆ ಒಂದು ಜೊತೆ ಕಪ್ಪು ಶೂ ಬಿಳಿ ಸಾಕ್ಸ್ ವಿತರಣೆಯಾಗಲಿದೆ.

ಸನ್ನಡತೆ ಕೈದಿಗಳ ಬಿಡಗಡೆ ಮಾರ್ಗಸೂಚಿ ಬದಲಾವಣೆ
ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಮಾರ್ಗಸೂಚಿ ಬದಲಾವಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಅವಧಿ ಮುನ್ನವೇ ಬಿಡುಗಡೆ ಮಾಡಲು ಅವಕಾಶವಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ವೇಳೆ ಅರ್ಹರನ್ನು ಗುರುತಿಸಿ ಗೃಹ ಇಲಾಖೆ ಬಿಡುಗಡೆ ಮಾಡುತ್ತದೆ. ಅದರಲ್ಲಿ ಕೆಲವು ಅತ್ಯಾಚಾರಿಗಳು, ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರೂ ಕೂಡ ಸನ್ನತಡೆ ಆಧಾರದ ಮೇಲೆ ಬಿಡುಗಡೆಯಾಗಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಜೈಲಿನ ನಿಯಮಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ. ಅತ್ಯಾಚಾರ ಆರೋಪದಡಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಹಾಗೂ ಪೋಸ್ಕೊ ಕಾಯ್ದೆ ಅಡಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ತಂದಿರುವ ನಿಯಮಗಳ ಬದಲಾವಣೆಗೆ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ರಾಷ್ಟ್ರೋತ್ಥಾನ ಪರಿಷತ್ ಗೆ ಸಿಎ ಸೈಟ್:
ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ಹುಕ್ಕೇರಿ ತಾಲ್ಲೂಕಿನ 19 ಕೆರೆಗಳಿಗೆ ಒದಗಿಸುವ ಕಾಮಗಾರಿ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 42.50 ರೂ. ಕೋಟಿ ಅಂದಾಜು ಮೊತ್ತದಲ್ಲಿ ಯೋಜನೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಕೆರೆಗೆ ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಯ 2ನೇ ಹಂತದ ಕಾಮಗಾರಿಯನ್ನು ರೂ. 49.00 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಹತ್ತಿರ ಹರಿಯುವ ಹಿರೇಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ. 12.42 ಕೋಟಿಗಳ ಮೊತ್ತದ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರ ಜತೆಗೆ ರಾಷ್ಟ್ರೋತ್ಥಾನ ಪರಿಷತ್ ಗೆ ಕಲಬುರಗಿಯಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಸಿಎ ನಿವೇಶನ ಹಂಚಿಕೆ ಮಾಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ಇತರೆ ನಿರ್ಣಯಗಳು:
ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿಗೆ ಕ್ಯಾಬಿನೆಟ್ ಅನುಮೋದನೆ. ಗುತ್ತಿಗೆ ಆಧಾರದ ಮೇಲೆ 1142 ಸಿಬ್ಬಂದಿ ನೇಮಕಕ್ಕೆ ಅನುಮೋದನೆ.
ಅನಂತ್ ಕುಮಾರ್ ಪ್ರತಿಷ್ಟಾನಕ್ಕೆ ಮೂರು ಎಕರೆ ಹಂಚಿಕೆ
ಭಗವತಿ ಏತ ನೀರಾವರಿ ಯೋಜನೆಗೆ ಅನುಮೋದನೆ
246 ಕೋಟಿ ವೆಚ್ಚದಲ್ಲಿ ಯೋಜನೆ ಗೆ ಕ್ಯಾಬಿನೆಟ್ ಅನುಮೋದನೆ
ಕಸ್ತೂರಿ ರಂಗನ್ ವರದಿ ತಿರಸ್ಕಾರ
ಕ್ಯಾಬಿನೆಟ್ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಕಾರಣ ಚರ್ಚೆ
ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿರುವ ರಾಜ್ಯ ಸರ್ಕಾರ.
ಜನವಸತಿ ಪ್ರದೇಶಗಳನ್ನು ಖಾಲಿ ಮಾಡಿಸುವುದು ಅಸಾಧ್ಯ ಎಂಬ ಬಲವಾದ ಕಾರಣ ನೀಡಿ ಕಸ್ತೂರಿ ರಂಗನ್ ವರದಿ ತಿರಸ್ಕಾರ.












Click it and Unblock the Notifications