ಲೋಕಸಭೆ ಚುನಾವಣೆಯೇ ಕಾಂಗ್ರೆಸ್ ಟಾರ್ಗೆಟ್:ಡಿಕೆಶಿ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು- ಯಾರೆಗೆಲ್ಲಾ ಸಚಿವ ಸ್ಥಾನ? ಇಲ್ಲಿ ತಿಳಿಯಿರಿ
ಬೆಂಗಳೂರು, ಮೇ 25: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೊಡಗಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಇಬ್ಬರು ನಾಯಕರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಿರುವಾಗಲೇ ಕನಿಷ್ಠ 20 ಸಚಿವ ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಗಾಗಿ ಲಾಬಿ ಮಾಡಲು ದೆಹಲಿ ತಲುಪಿದ್ದಾರೆ.
ಹಲವು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಸಿಎಂ ಸಿದ್ದರಾಮಯ್ಯ ಆಕಾಂಕ್ಷಿಗಳ ಜತೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಆರ್.ಬಿ.ತಿಮ್ಮಾಪುರ್, ಬಿ.ಕೆ.ಹರಿಪ್ರಸಾದ್, ಬಿ.ನಾಗೇಂದ್ರ, ಗಣೇಶ್ ಹುಕ್ಕೇರಿ, ಪುಟ್ಟರಂಗಶೆಟ್ಟಿ, ಪ್ರಕಾಶ್ ರಾಥೋಡ್, ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ದೆಹಲಿಯಲ್ಲಿ ಬೀಡುಬಿಟ್ಟು ಸಚಿವ ಸಂಪುಟಕ್ಕೆ ಲಾಬಿ ನಡೆಸುತ್ತಿದ್ದಾರೆ.
ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಭೆ ನಡೆಸುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಉಭಯ ನಾಯಕರು ತಮ್ಮದೇ ಆದ ಹೆಸರಿನ ಪಟ್ಟಿಯನ್ನು ನೀಡಿದ್ದಾರೆ ಎನ್ನಲಾಗಿದ್ದು, ಹೆಸರು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ.

ಶಿವಕುಮಾರ್ ಅವರು ಯುವ ಶಾಸಕರನ್ನು ಸಂಪುಟಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರು ಆರ್‌ವಿ ದೇಶಪಾಂಡೆ ಸೇರಿದಂತೆ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ತಮ್ಮ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಬಸವರಾಜ್ ರಾಯರೆಡ್ಡಿ, ಎಂ.ಕೃಷ್ಣಪ್ಪ, ಕೆ.ಎನ್.ರಾಜಣ್ಣ ಸೇರಿದಂತೆ ಇತರರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದಾರೆ.

ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ ಕಾಂಗ್ರೆಸ್ ಸುಮಾರು 28 ಸಚಿವರನ್ನು ಸೇರ್ಪಡೆಗೊಳಿಸಲು ಮುಂದಾಯಿತು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಹೊರತುಪಡಿಸಿ ಎಂಟು ಸಚಿವರಿಗೆ ಸಂಪುಟವನ್ನು ಸೀಮಿತಗೊಳಿಸಿತು.
ಭಾನುವಾರದ ವೇಳೆಗೆ ಕನಿಷ್ಠ 20 ಸಚಿವರನ್ನು ಸೇರ್ಪಡೆಗೊಳಿಸುವ ಉದ್ದೇಶದಿಂದ ಬುಧವಾರ ಮತ್ತು ಗುರುವಾರ ಸಂಪುಟದಲ್ಲಿ ಒಮ್ಮತಕ್ಕೆ ಆಗಮಿಸುವ ಹೊಸ ಪ್ರಯತ್ನವನ್ನು ಕಾಂಗ್ರೆಸ್ ಪ್ರಾರಂಭಿಸಲಿದೆ. ಸಚಿವ ಸಂಪುಟ ವಿಸ್ತರಣೆಯನ್ನು ಮುಖ್ಯಮಂತ್ರಿ ಮಾಡಲಿದ್ದಾರೆ. ಕಾಂಗ್ರೆಸ್ ಅವರಿಗೆ ಅಧಿಕಾರ ನೀಡಿದೆ ಎಂದು ಕೆಪಿಸಿಸಿ ಮುಖ್ಯಸ್ಥ ಶಿವಕುಮಾರ್ ಹೇಳಿದ್ದಾರೆ.
ಮೇ 20 ರಂದು, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಎಂಟು ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಜಿಲ್ಲಾ ಉಸ್ತುವಾರಿ ಪಟ್ಟಿ
ಚಿತ್ರದುರ್ಗ - ಟಿ.ಬಿ.ಜಯಚಂದ್ರ
ಶಿವಮೊಗ್ಗ - ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ
ಚಿಕ್ಕಮಗಳೂರು - ಉಡುಪಿ - ಬಿಕೆ ಹರಿಪ್ರಸಾದ್
ಮಂಗಳೂರು - ಮಿಥುನ್ ರೈ, ಅಶೋಕ್ ರೈ
ಬೆಳಗಾವಿ - ಸತೀಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್
ಮೈಸೂರು - ಎಚ್ ಸಿ ಮಹಾದೇವಪ್ಪ, ಯತೀಂದ್ರ
ಮಡಿಕೇರಿ ಅಥವಾ ಕೊಡುಗು - ಪೊನ್ನಣ್ಣ
ಬಳ್ಳಾರಿ - ವಿ.ಎಸ್ ಉಗ್ರಪ್ಪ, ನಾಗೇಂದ್ರ
ಹಾಸನ - ಶಿವಲಿಂಗೇಗೌಡರಿಗೆ
ತುಮಕೂರು - ಡಾ. ಜಿ ಪರಮೇಶ್ವರ್
ಹುಬ್ಬಳ್ಳಿ ಧಾರವಾಡ - ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ
ಕೋಲಾರ - ರಾಮಲಿಂಗರೆಡ್ಡಿ, ಕೊತ್ತೂರು ಮಂಜುನಾಥ್
ಬೆಂಗಳೂರು ಗ್ರಾಮಾಂತರ - ಡಿಕೆ ಸುರೇಶ್
ಉತ್ತರ ಕನ್ನಡ - ದೇಶಪಾಂಡೆ












Click it and Unblock the Notifications