DCM Posts: ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ ಎಂದ ಖರ್ಗೆ: ಮೂವರಿಗೆ ಡಿಸಿಎಂ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಪಟ್ಟು
ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡುವ ಮುನ್ನವೇ ರಾಜ್ಯ ರಾಜಕೀಯದಲ್ಲಿ ತೆರೆಮರೆಯ ಚಟುವಟಿಕೆಗಳು ಜೋರಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸದ್ಯಕ್ಕೆ ಡಿಸಿಎಂ ಹುದ್ದೆಗಳ ಸೃಷ್ಟಿ ಇಲ್ಲ ಎಂದು ದೃಢಪಡಿಸಿದ್ದಾರೆ. ಇತ್ತ ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಣದ ಮೂವರು ನಾಯಕರಿಗೆ ಡಿಸಿಎಂ ಹುದ್ದೆ ಕೊಡಿಸಲು ಹೈಕಮಾಂಡ್ ಮೇಲೆ ಒತ್ತಡ ತರಲು ಸಜ್ಜಾಗಿದ್ದಾರೆ.
ಸಿಎಂ ಪದಗ್ರಹಣ ಹಾಗೂ ನೂತನ ಸಚಿವರ ಅಧಿಕಾರ ಸ್ವೀಕಾರ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದರು. ಸಿಎಂ ಅಧಿಕಾರ ವಹಿಸಿಕೊಳ್ಳಲಿ. ಅವರೊಂದಿಗೆ ಎಷ್ಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೋ ಎಂಬುದು ಗೊತ್ತಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಪ್ರಸ್ತಾವನೆ ಇಲ್ಲ. ಎರಡು ಹಂತಗಳಲ್ಲಿ ಸಚಿವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಯಾರು ಎಂಬುದು ಇನ್ನೂ ತಿಳಿದಿಲ್ಲ, ಪಟ್ಟಿ ಬರಬೇಕಿದೆ ಎಂದಿದ್ದರು. ಈ ಮೂಲಕ ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಅನುಮಾನ ಎನ್ನಲಾಯಿತು.

3 ನಾಯಕರಿಗೆ ಡಿಸಿಎಂ ಹುದ್ದೆ ಕೊಡಿ: ಸಿದ್ದರಾಮಯ್ಯ
ಸ್ವತಃ ಎಐಸಿಸಿ ಅಧ್ಯಕ್ಷರೇ ಡಿಸಿಎಂ ಹುದ್ದೆ ಕುರಿತು ಮಾಹಿತಿ ನೀಡಿದ ಹೊರತಾಗಿಯೂ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದಾರೆ. ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಖಾನ್, ಜಿ.ಪರಮೇಶ್ವರ್ ಹಾಗೂ ಎಂಬಿ ಪಾಟೀಲ್ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ವರಿಷ್ಠ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಚಿವ ಸಂಪುಟದ ಜೊತೆಗೆ ಡಿಸಿಎಂ ಹುದ್ದೆಗಳ ಮೇಲೂ ಸಿದ್ದರಾಮಯ್ಯ ಹಿಡಿತ ಸಾಧಿಸಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ.
ಯತೀಂದ್ರಗೆ ಒಳ್ಳೆಯ ಸ್ಥಾನಮಾನದ ಭರವಸೆ
ಸಿದ್ದರಾಮಯ್ಯ ಅವರು ಯಾವುದೇ ಗೊಂದಲ, ತಕರಾರಿಲ್ಲದೇ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ವತಃ ರಾಹುಲ್ ಗಾಂಧಿಯವರ ಸಿದ್ದರಾಮಯ್ಯರನ್ನು ದೆಹಲಿಗೆ ಕರೆಸಿ ಧನ್ಯವಾದ ಹೇಳಿದ್ದಾರೆ. ಪಕ್ಷಕ್ಕೆ ಧಕ್ಕೆ ಆಗದಂತೆ ಸ್ಥಾನದಿಂದ ಹೊರ ನಡೆದಿದ್ದೀರಿ ಎಂದಿರುವ ರಾಹುಲ್ ಗಾಂಧಿ, ಪುತ್ರ ಯತೀಂದ್ರ ಅವರಿಗೆ ಒಳ್ಳೆಯ ಸ್ಥಾನ ನೀಡಲಾಗುವುದೆಂದು ಸಿದ್ದರಾಮಯ್ಯರಿಗೆ ಅವರಿಗೆ ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಯತೀಂದ್ರಗೆ ಸಿಗುತ್ತಾ ಡಿಸಿಎಂ ಹುದ್ದೆ?
ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತೋರಿದ ನಡೆ ಮಗನಿಗೆ ಪಕ್ಷದಲ್ಲಿ ಉನ್ನತ ಹುದ್ದೆಗೆ ಏರಳು ದಾರಿ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತದೆ. ಶಾಸಕನಾಗಿರುವ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಹೈಕಮಾಂಡ್ ಉತ್ತಮ ಸ್ಥಾನ ನೀಡಲು ನಿರ್ಧರಿಸಿದ್ದು, ಅದು ಡಿಸಿಎಂ ಹುದ್ದೆ ಎಂಬ ಮಾತುಗಳು ಕೇಳಿ ಬಂದಿವೆ. ಡಿಸಿಎಂ ಹುದ್ದೆ ಸೃಷ್ಟಿ ಸದ್ಯಕ್ಕಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಇದೆಲ್ಲ ನೋಡಿದರೆ ಇಷ್ಟು ದಿನ ಸಿಎಂ ಹುದ್ದೆಗಾಗಿ ನಡೆದ ರಾಜಕೀಯ ಇನ್ನುಮುಂದೆ ಡಿಸಿಎಂ ಹುದ್ದೆಗಾಗಿ ನಡೆಯಲಿದೆ ಎಂದು ರಾಜ್ಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇಂದು ಸಿದ್ದರಾಮಯ್ಯ, ಡಿಕೆಶಿ ದೆಹಲಿ ಪ್ರಯಾಣ
ಹಂಗಾಮಿ ಸಿಎಂ ಸಿದ್ದರಾಮಯ್ಯ ಹಾಗೂ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಜಂಟಿಯಾಗಿ ಇಂದು ಸೋಮವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಯಾರಿರಬೇಕು. ಸಿಎಂ ಡಿಕೆ ಶಿವಕುಮಾರ್ ಜತೆ ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕೆಂಬ ಚರ್ಚೆ ನಡೆಯಲಿವೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರು ಹೊಸ ಸಚಿವರ ಪಟ್ಟಿಯನ್ನು ಮುಂದಿಡಲಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರು ತಮ್ಮ ಬಣದ ಮೂವರಿಗೆ ಡಿಸಿಎಂ ಹುದ್ದೆ ಕೊಡುವಂತೆ ಒತ್ತಡ ಹಾಕಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಿಎಂ ಪ್ರದಗ್ರಹಣಕ್ಕೂ ಮೊದಲೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುತೂಹಲ ಹೆಚ್ಚಾಗುಂತೆ ಮಾಡಿದೆ.













Click it and Unblock the Notifications