Karnataka Cabinet: ನನಗೆ ಸಿಎಂ ಮಾಡುವುದು ಗೊತ್ತಿದೆ, ಇಳಿಸೋದು ಗೊತ್ತಿದೆ: ಸಿಎಂ ವಿರುದ್ದ ತೊಡೆತಟ್ಟಿದ ಬಿ ಕೆ ಹರಿಪ್ರಸಾದ್
ಬೆಂಗಳೂರು, ಜುಲೈ 22: ನನಗೆ ಸಿಎಂ ಮಾಡುವುದು ನನಗೆ ಗೊತ್ತಿದೆ. ಅವರನ್ನು ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಬಿ ಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಬಿ ಕೆ ಹರಿಪ್ರಸಾದ್ ಆಡಿರುವ ಮಾತು ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಮ್ಮನ್ನು ಬಹಳ ವ್ಯವಸ್ಥಿತವಾಗಿ ತುಳಿಯುತ್ತಾರೆ. ನಾನು ಮಂತ್ರಿ ಆಗೋದು ಬಿಡುವುದು ಬೇರೆ ಪ್ರಶ್ನೆ. ಆದರೆ ದೇಶದ ಬೇರೆ ರಾಜ್ಯಗಳಲ್ಲಿನ ಐವರು ಮುಖ್ಯಮಂತ್ರಿ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷಗಳ ಕಾಲ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಮ್ಮನ್ನು ಓಡಿಸಿ ಬಿಡುತ್ತಿದ್ದರು. ಛತ್ತೀಸ್ಗಡ ಮುಖ್ಯಮಂತ್ರಿ ನಮ್ಮ ನೆಂಟರು ಅಲ್ಲ, ಹಾಗಿದ್ದರೂ ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ನನಗೆ ಮುಖ್ಯಮಂತ್ರಿ ಮಾಡೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸೋದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೆವು.ಕರ್ನಾಟಕದಲ್ಲಿ ರಾಜಕೀಯವಾಗಿ ಈಡಿಗ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದ್ರು ಆಗುತ್ತಿಲ್ಲ. ಅವಕಾಶ ವಂಚಿರಾಗುತ್ತಿರುವುದು ನೋಡಿದರೆ ಯಾರದ್ದೊ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನ್ನಿಸುತ್ತದೆ ಎಂದು ಹೇಳಿದರು.
ಇನ್ನೂ ಸ್ವಪಕ್ಷ ನಾಯಕರ ವಿರುದ್ದವೇ ಅಸಮಾಧಾನ ಹೊರ ಹಾಕಿದ ಅವರು, ಮುಖ್ಯಮಂತ್ರಿ ಹಾಗೂ ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕೆಂದು ಯೋಚಿಸುತ್ತೇವೆ. ಸ್ವಾರ್ಥಕ್ಕೆ ಯಾವುದನ್ನೂ ಕೇಳುವುದಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್ ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನು ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನೂ ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ. ನಾಲ್ಕು ಜನ ಟಿಕೆಟ್ ವಂಚಿತರಾದರು. ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳು ಅಲ್ಲ.ಅಲ್ಪಸಂಖ್ಯಾತರನ್ನು ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡುತ್ತಾರೆ. ಲಿಂಗಾಯತರು, ಒಕ್ಕಲಿಗರು ,ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಬಿಟ್ಟುಕೊಡಲಿ ಎಂದರು.












Click it and Unblock the Notifications