ಮಟನ್ ರೇಟ್ ಜಾಸ್ತಿಯಾದ್ರೆ ತಗೋತೀರ, ಟಿಕೆಟ್ ಯಾಕೆ ತಗೋಳಲ್ಲ?
ಕಾಂಗ್ರೆಸ್ ಸರ್ಕಾರವು ರಾಜ್ಯಾದ್ಯಂತ ನಾಲ್ಕೂ ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿದೆ. ಇದಕ್ಕೆ ಸಾರ್ವಜನಿಕರಿಂದ ಹಾಗೂ ವಿಪಕ್ಷ ನಾಯಕರಿಂದಲೂ ವಿರೋಧ ವ್ಯಕ್ತವಾಗಿದೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕಾಂಗ್ರೆಸ್ ಸಚಿವ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆ ಕೂಡ ಗಮನ ಸೆಳೆದಿದೆ. ಡೀಸೆಲ್, ಅಕ್ಕಿ, ಬಟ್ಟೆ ಬೆಲೆ ಹೆಚ್ಚಾದರೂ ಹಣ ಕೊಟ್ಟು ಖರೀದಿಸುತ್ತೀರಿ. ಇನ್ನು 100 ರೂಪಾಯಿ ಇದ್ದ ಮಟನ್ 500 ರೂಪಾಯಿ ಆದ್ರೂ ತೆಗೆದುಕೊಳ್ಳುತ್ತೀರಿ, ಆದರೆ ಟಿಕೆಟ್ ತಗೊಳ್ಳೋಕೆ ಆಗಲ್ವಾ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಸರ್ಕಾರ ಒಂದು ಸಂಸ್ಥೆಗೆ ಸಹಾಯಧನವನ್ನು ಎಷ್ಟು ಕೊಡಲು ಸಾಧ್ಯ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಪಕ್ಕದ ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಸ್ ದರ ನಮಗಿಂತಲೂ ಏರಿಸಿದ್ದಾರೆ. ಆದರೆ ರಾಜ್ಯದಲ್ಲಿ 15 ವರ್ಷಗಳಿಂದ ದರ ಪರಿಷ್ಕರಣೆಯೇ ಆಗಿಲ್ಲ ಎಂದು ಕಾರಣ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ 7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ವೇತನ ಕೂಡ ಹೆಚ್ಚಳ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ಸಂಸ್ಥೆ ಇನ್ನಷ್ಟು ಚೆನ್ನಾಗಿ ಮುನ್ನಡೆಯಬೇಕು ಅಂದರೆ ದರ ಏರಿಸುವುದು ಅನಿವಾರ್ಯ. ಸಾಮಾನ್ಯವಾಗಿ ಎರಡು ಮೂರು ವರ್ಷಕ್ಕೊಮ್ಮೆ ದರ ಏರಿಕೆ ಮಾಡಬೇಕಿತ್ತು. ನಮ್ಮಲ್ಲಿ ದಶಕದಿಂದಲೂ ದರ ಏರಿಸಿಲ್ಲ ಎಂದಿದ್ದಾರೆ.

ಬಸ್ ಪ್ರಯಾಣ ದರ ಏರಿಕೆ ಮಾಡಿರುವುದಕ್ಕೂ ಶಕ್ತಿ ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಹಲವು ವರ್ಷಗಳಾಗಿವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ್ದೇವೆ. ಬಸ್ ಟಿಕೆಟ್ ದರ ಏರಿಕೆ ಮಾಡದಿದ್ದರೆ ಸಾರಿಗೆ ಸಂಸ್ಥೆಗಳನ್ನು ನಿಭಾಯಿಸುವುದು ಹೇಗೆ ಸಾಧ್ಯ? ಪ್ರತಿ ಎರಡು ಮೂರು ವರ್ಷಕ್ಕೆ ದರ ಏರಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದೂ ಚಲುವರಾಯಸ್ವಾಮಿ ಹೇಳಿದ್ದಾರೆ.
ಸದ್ಯ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಹಿಂದಿನ ಸರ್ಕಾರ ನಮ್ಮ ಮೇಲೆ 5,900 ಕೋಟಿ ರೂಪಾಯಿ ಸಾಲವನ್ನು ಬಿಟ್ಟು ಹೋಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ನಿರ್ಣಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಹಿಂದೆ 2006ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿತ್ತು. ಆಗ ಶೇ 8.2ರಷ್ಟು ಹಾಗೂ ನಂತರ 2008ರಿಂದ 2013ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 47.8ರಷ್ಟು ಪ್ರಯಾಣ ದರ ಹೆಚ್ಚಳವಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಆರ್.ಅಶೋಕ್ ಅವರೇ ಸಾರಿಗೆ ಸಚಿವರಾಗಿದ್ರು. ಆದರೆ 2013ರಿಂದ 2018ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ ಶೇ 16.46ರಷ್ಟು ಮಾತ್ರ ದರ ಹೆಚ್ಚಳ ಮಾಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ದರ ಏರಿಕೆ ಮಾಡುತ್ತಲೇ ಬಂದಿದೆ. ಈಗ ಸುಮ್ಮನೆ ಪ್ರತಿಭಟನೆ ನಾಟಕ ಆಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications