ಸೋಮವಾರದಿಂದ ಬಜೆಟ್ ಅಧಿವೇಶನ; ಫೆ. 16ಕ್ಕೆ ಬಜೆಟ್

ಬೆಂಗಳೂರು, ಫೆಬ್ರವರಿ 11: ಕರ್ನಾಟಕದ ಬಜೆಟ್ ಅಧಿವೇಶನ 2024 ಫೆಬ್ರವರಿ 12ರ ಸೋಮವಾರ ಆರಂಭವಾಗಲಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16ರ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ 2024 ನಡೆಯಲಿದೆ. ಫೆಬ್ರವರಿ 12ರ ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣವನ್ನು ಮಾಡಲಿದ್ದಾರೆ.

Karnataka Budget Session 2024 From February 12 To 23

ಪ್ರತಿ ವರ್ಷದ ಮೊದಲ ವಿಧಾನಸಭೆ ಕಲಾಪದ ಸಂದರ್ಭದಲ್ಲಿ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯವಾಗಿದೆ. ರಾಜ್ಯಪಾಲರ ಭಾಷಣದ ಬಳಿಕ ಅಂದಿನ ಕಲಾಪ ಮುಂದೂಡಲಾಗುತ್ತದೆ. ಮರು ದಿನದಿಂದ ಕಲಾಪಗಳು ಮತ್ತೆ ಆರಂಭವಾಗುತ್ತದೆ.

ಫೆಬ್ರವರಿ 13 ರಿಂದ 15ರ ತನಕ ರಾಜ್ಯಪಾಲರ ಭಾಷಣದ ಮೇಲೆ, ಇತರ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ. ಫೆಬ್ರವರಿ 16ರ ಶುಕ್ರವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಬಳಿಕ ಫೆ. 23ರ ತನಕ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.

2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ದಾಖಲೆ ಮಾಡಲಿದ್ದಾರೆ. ಇದುವರೆಗೂ 14 ಬಾರಿ ಅವರು ಬಜೆಟ್ ಮಂಡಿಸಿದ್ದು, ಫೆಬ್ರವರಿ 16ರಂದು 15ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಈ ಬಾರಿ ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಗಾತ್ರ ಸುಮಾರು 3.80 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಈವರೆಗೂ ರಾಜ್ಯದ ಬಜೆಟ್‌ ಗಾತ್ರ 3.27 ಲಕ್ಷ ಕೋಟಿ ದಾಟಿರಲಿಲ್ಲ. ಆದರೆ ಈ ಬಾರಿ ಅದು ಸುಮಾರು 50 ಸಾವಿರ ಕೋಟಿಯಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಬಜೆಟ್‌ನಲ್ಲಿ ಕೆಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಈಗಾಗಲೇ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಇನ್ನೂ ಹಲವು ಭರವಸೆಗಳನ್ನು ಈಡೇರಿಸಬೇಕಿದೆ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಇಲಾಖೆವಾರು ಸಭೆಗಳನ್ನು ನಡೆಸಿ ಆದಾಯ ಸಂಗ್ರಹಣೆಯ ಲೆಕ್ಕ ಹಾಕಿದ್ದಾರೆ. ಅಲ್ಲದೇ ಇಲಾಖಾವಾರು ಬೇಡಿಕೆಗಳನ್ನು ಸಹ ಪಡೆದಿದ್ದಾರೆ. ಇವುಗಳಲ್ಲಿ ಯಾವ ಯಾವ ಬೇಡಿಕೆಗಳು ಈಡೇರಲಿದೆ ಎಂದು ಕಾದು ನೋಡಬೇಕಿದೆ.

ಪ್ರಮುಖವಾಗಿ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಬೇಡಿಕೆಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ತುರ್ತಾಗಿ ಭರ್ತಿ ಮಾಡಬೇಕಿರುವ ಹುದ್ದೆಗಳ ಭರ್ತಿಗಾಗಿ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೈತರು ಈಗಾಗಲೇ ಬೆಂಗಳೂರು ಚಲೋ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದು ಕ್ಷೇತ್ರ (ಬೆಂಗಳೂರು ಗ್ರಾಮಾಂತರ) ಮಾತ್ರ. ಈಗ ಲೋಕಸಭೆ ಚುನಾವಣೆ ಹತ್ತಿರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆದ್ದರಿಂದ ಒಂದಷ್ಟು ಜನಪ್ರಿಯ ಘೋಷಣೆಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುವ ಸಾಧ್ಯತೆ ಇದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಸರ್ಕಾರ ಕೆಲವು ತೆರಿಗೆಗಳನ್ನು ಹೆಚ್ಚಳ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ದಾಖಲೆಯ ಬಜೆಟ್ ಮಂಡನೆ ಮಾಡುತ್ತಿರುವ ಸಿದ್ದರಾಮಯ್ಯ ಯಾವ ವರ್ಗಕ್ಕೆ ಯಾವ ಕೊಡುಗೆ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+