ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಘೋಷಣೆ ಮಾಡಿದ ಸಿಎಂ
ಬೆಂಗಳೂರು. ಮಾ. 06: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಹಾಗೂ 30 ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ 10,000 ಕೋಟಿ ರೂ. ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೆ ಮಹತ್ವದ ಹೇಳಿಕೆ ಕೊಟ್ಟಿರುವ ಸಿಎಂ ಯಡಿಯೂರಪ್ಪ ಅವರು, ಮೂರು ವರ್ಷಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ. ನಿನ್ನೆ ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡಿದ್ದೇವೆ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸರ್ಕಾರದ ಪ್ರಮುಖರ ಜತೆ ಮಾತುಕತೆ ನಡೆಸಿ, ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಜೆಟ್‌ನಲ್ಲಿಯೆ ಹೇಳಬಹುದಿತ್ತು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು.ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗ ಹೇಳಿದ್ದಾರೆ, ಸಂತೋಷ. ಆದರೆ ಹತ್ತು ಸಾವಿರ ಕೋಟಿ ರೂ ಮೀಸಲಿಡುತ್ತೇವೆ ಎಂದಿದ್ದಾರೆ. ಆದರೆ ಹಣ ಎಲ್ಲಿದೆ? ಕೇವಲ ಭರವಸೆ ಆಗಬಾರದು. ನಾನು ಕೂಡ ಬಾಗಲಕೋಟೆ ಜಿಲ್ಲೆಯವನೇ. ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವವನೇ ಎಂದಿದ್ದಾರೆ.












Click it and Unblock the Notifications