Karnataka Budget 2025: ಬಜೆಟ್‌ಗೂ ಮುನ್ನ ರಾಜ್ಯದ ಜನರಿಗೆ ಮಹತ್ವ ಭರವಸೆ ಕೊಟ್ಟ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ಇಂದು 16ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಂಡಿಸಿರುವ ಸಿಎಂ ಎಂಬ ಖ್ಯಾತಿಗೂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಆರೋಗ್ಯ ಸರಿಯಾಗಿಲ್ಲ. ನಡೆದಾಡಲು ಸಾಧ್ಯವಾಗದ ಅವರು ವೀಲ್‌ಚೇರ್‌ನಲ್ಲೇ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಇಂದಿನ ರಾಜ್ಯ ಬಜೆಟ್ ಮೇಲೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆ ಅವರು ಬಜೆಟ್ ಮಂಡನೆಗೂ ಮುನ್ನ ಅವರು ರಾಜ್ಯದ ಜನರಿಗೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.
ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ ಮತ್ತಷ್ಟು ದೃಢ ಹೆಜ್ಜೆಯನ್ನಿಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ಒಂದು ವರ್ಷಗಳ ಕಾಲದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ದಾರಿದೀಪವಾಗಲಿದೆ ಎಂಬುದು ನಿಸ್ಸಂಶಯ ಎಂದು ಹೇಳಿದ್ದಾರೆ.

ಬಜೆಟ್ ಎನ್ನುವುದು ಕೇವಲ ಹಾಳೆಗಳ ಮೇಲಿನ ಲೆಕ್ಕವಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇವೆ ಎಂಬ ಭರವಸೆ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ರೈತರು, ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಧರ್ಮಗಳ ಗುರುಗಳೊಂದಿಗೆ ಸಭೆ ನಡೆಸಿದ್ದಾರೆ. ಪಕ್ಷಾತೀತವಾಗಿ ಸಮಾಜದ ಎಲ್ಲ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಗ್ಯಾರಂಟಿಗಳನ್ನು ಸರಿದೂಗಿಸುವ ಸವಾಲು: 16ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಲೆಕ್ಕಾಚಾರದ ಬಜೆಟ್ ಮಂಡಿಸಿದ್ದರು. ಇನ್ನು ಈ ಬಾರಿಯ ಬಜೆಟ್ 4 ಲಕ್ಷ ಕೋಟಿ ರೂಪಾಯಿಗೂ ಮೀರಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಜೆಟ್‌ಗಳಲ್ಲಿ ನೀರಾವರಿ, ಲೋಕೋಪಯೋಗಿ, ಮೂಲಸೌಕರ್ಯ, ನಗರಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಗೆ ಕಡಿಮೆ ಅನುದಾನ ನೀಡಲಾಗಿತ್ತು. ಹಾಗಾಗಿ ಈ ಬಾರಿ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸುವ ಸವಾಲಿನೊಂದಿಗೆ ಅವರು ಈ ಬಜೆಟ್‌ನಲ್ಲಿ ಕೆಲವೊಂದು ಪ್ರಮುಖ ಘೋಷಣೆಗಳನ್ನು ಮಾಡುತ್ತಾರಾ? ಇಲ್ಲವಾ? ಎನ್ನುವ ಗೊಂದಲವೂ ಇದೆ.












Click it and Unblock the Notifications