Karnataka Budget 2024: ಜಲಸಂಪನ್ಮೂಲ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಏನು?
ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಂಡನೆ ಮಾಡುತ್ತಿರುವ 15ನೇ ಬಜೆಟ್ ಇದಾಗಿದೆ. ಜಲಸಂಪನ್ಮೂಲ ಅಭಿವೃದ್ದಿಗೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ನೀಡಿದೆ.
ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ಯೋಜನಾ ವಿಭಾಗವನ್ನು ಹಾಗೂ 2 ಉಪ ವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥವಾಗಿ (Pre-Commissioning Test) ನೀರು ಹರಿಸಿ ಚಾಲನೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸಲಾಗುವುದರ ಜೊತೆ ಸಮತೋಲನಾ ಜಲಾಶಯದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.
ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸಲಾಗುವುದು.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಿಲಾಗಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಹಾಗೆಯೇ ಹಿಂದಿನ ರಾಜ್ಯ ಸರ್ಕಾರ ತನ್ನ ಆಯವ್ಯಯ ಘೋಷಣೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾನ್ಯತೆ ನೀಡಲಾಗುತ್ತಿರುವುದರಿಂದ ಪ್ರಧಾನಮಂತ್ರಿಗಳಿಗೆ ಅಭಿನಂದನೆಗಳನ್ನು ತಿಳಿಸಲಾಗಿತ್ತು, ಆದರೆ ಈವರೆಗೆ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರ ಸರ್ಕಾರವು ಘೋಷಿಸದೆ ಇರುವುದರಿಂದ ಇದು ಹುಸಿಯಾದ ಘೋಷಣೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ರಾಜ್ಯ ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಸುಮಾರು 75,000 ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸಲು ಯೋಜಿಸಿದ್ದು, ಆಯವ್ಯಯದಲ್ಲಿ ಘೋಷಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಯನ್ನು ರೈತರಿಗೆ ತಲುಪಿಸಲು ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು.
ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಡಿ 3.9 TMC ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಪ್ರಸ್ತುತ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅರಣ್ಯ ತೀರುವಳಿ ನಿರೀಕ್ಷಿಸಿ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆಯನ್ನು ಚಾಲನೆಗೊಳಿಸಲಾಗಿರುತ್ತದೆ. ಆದರೆ ಈ ನಡುವೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅರಣ್ಯ ತೀರುವಳಿಯನ್ನು ಅನುಮೋದಿಸದೇ ಮುಂದೂಡಲಾಗಿರುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಜಲಾಶಯ ವ್ಯಾಪ್ತಿಯಲ್ಲಿನ ರೈತರ ಬಹುದಿನದ ಬೇಡಿಕೆಯಾದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯ 15,600 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿ ಸಿದ್ಧವಾಗಿದ್ದು, ಸದರಿ ಯೋಜನೆಯ ಅನುಷ್ಠಾನ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಚಾಲನೆಗೊಳಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗುವುದು.












Click it and Unblock the Notifications