Karnataka Budget 2024; ದೇವಾಲಯಕ್ಕೆ ಸಿದ್ದರಾಮಯ್ಯ ಕೊಡುಗೆ ಏನು?
ಬೆಂಗಳೂರು, ಫೆಬ್ರವರಿ 16; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದಲ್ಲಿ ಅವರು ಧಾರ್ಮಿಕ ದತ್ತಿ ಇಲಾಖೆಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ಘೋಷಣೆ ಮಾಡಿದ್ದಾರೆ.
2024-25ನೇ ಸಾಲಿನ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ, "ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 20 ಕೋಟಿ ರೂ. ಅನುದಾನ ಒದಗಿಸಲಾಗುವುದು" ಎಂದು ಘೋಷಣೆ ಮಾಡಿದರು.

ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ತಿರುಮಲದಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ವಾರಣಾಸಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಮುಖ ಘೋಷಣೆಗಳು
* ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ ಇಲಾಖೆ ವತಿಯಿಂದ 158 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳನ್ನು ರಚಿಸಲಾಗುತ್ತದೆ.
* ಯಾವುದೇ ಆದಾಯವಿಲ್ಲದ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ Vision Group ರಚಿಸಲಾಗುವುದು.
* ಇನಾಂ/ ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ʻಸಿʼ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದರು.
2023ರ ಡಿಸೆಂಬರ್‌ನಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಾಲಯಕ್ಕೆ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಮಾಡಿದ್ದರು. ಇಂದಿನ ಬಜೆಟ್‌ನಲ್ಲಿ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.
ಸಚಿವರ ಮುಂದೆ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಆಗುತ್ತಿಲ್ಲ ಎಂದು ಹುಲಗಿ ಗ್ರಾಮ ಪಂಚಾಯತಿಯ ಕೆಲವು ಸದಸ್ಯರು ಮತ್ತು ಅಲ್ಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು.
ಹುಲಿಗಿಯ ದೇವಸ್ಥಾನದ ಆಡಳಿತಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಚಿವರು ಸಭೆಯನ್ನು ನಡೆಸಿದ್ದರು. ದೇವಸ್ಥಾನದಲ್ಲಿ 55 ಕೋಟಿ ರೂ. ನಿಶ್ಚಿತ ಠೇವಣಿ ಇದೆ. 2018-19ರಲ್ಲಿ 7.47 ಕೋಟಿ ರೂ., 2019-20ರಲ್ಲಿ 9.28 ಕೋಟಿ ರೂ., 2020-21ರಲ್ಲಿ 4.33 ಕೋಟಿ ರೂ., 2021-22ರಲ್ಲಿ 7.11 ಕೋಟಿ ರೂ., ಮತ್ತು 2022-23ರಲ್ಲಿ 14.27 ಕೋಟಿ ರೂ. ನಷ್ಟು ದೇವಸ್ಥಾನಕ್ಕೆ ಆದಾಯ ಸಂಗ್ರಹವಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು.
ದೇವಾಲಯಕ್ಕೆ ಪ್ರತಿ ಮಂಗಳವಾರ ಕನಿಷ್ಟ 60 ಸಾವಿರ ಜನರು ಬರುತ್ತಾರೆ. ಪ್ರತಿ ಹುಣ್ಣಿಮೆಗೆ ಲಕ್ಷಗಟ್ಟಲೇ ಜನರು ಸೇರುತ್ತಾರೆ. ಅಗತ್ಯ ಸಂಖ್ಯೆಯಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯಗಳು ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಶೌಚಕ್ಕೆ ತೆರಳಿ ಮಲೀನ ಮಾಡುತ್ತಾರೆ. ದೇವಸ್ಥಾನದ ಸುತ್ತಲು ಶುಚಿತ್ವ ಇಲ್ಲದೇ ಇರುವುದರಿಂದ ನೋಣಗಳ ಕಾಟವಿದೆ. ದೇವಸ್ಥಾನದ ಸುತ್ತಲು ಆರೋಗ್ಯಕರ ಪರಿಸರ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications