Karnataka Budget 2023: ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಪಣತೊಟ್ಟ ಸಿದ್ದರಾಮಯ್ಯ!; ಬಜೆಟ್‌ ನಲ್ಲಿ ಕೊಟ್ಟ ಯೋಜನೆಗಳೇನು?

ಬೆಂಗಳೂರು, ಜುಲೈ 07: ರಾಜ್ಯ ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 14ನೇ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. 3 ಲಕ್ಷದ 27 ಸಾವಿರ ಕೋಟಿ ರೂ. ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಈ ಬಾರಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪಣತೊಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಅವಶ್ಯಕ ಅನುದಾನ ನೀಡದೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷಿಸಿರುವುದು ವಿಷಾದನೀಯ ಬೆಳವಣಿಗೆ ಎಂದು ಸಿದ್ದರಾಮಯ್ಯ ಬಜೆಟ್‌ ನಲ್ಲಿ ತಿಳಿಸಿದ್ದಾರೆ.

Karnataka Budget 2023: Siddaramaiahs Contribution to Empowering Backward Communities!

ವೈದ್ಯಕೀಯ, ಇಂಜಿನಿಯರಿಂಗ್‌ ಮತ್ತು ಇತರೆ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಅರಿವು ಎಂಬ ಯೋಜನೆಯ ಮುಖಾಂತರ ವಾರ್ಷಿಕ ಒಂದು ಲಕ್ಷ ರೂ.ಗಳ ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುತ್ತಿತ್ತು. ಇದರಿಂದ 11,956 ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ, ಈ ಕಾರ್ಯಕ್ರಮವನ್ನು ಹಿಂದಿನ ಸರ್ಕಾರವು 2020-21ನೇ ಸಾಲಿನಿಂದ ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರವು ಪುನರ್‌ ಚಾಲನೆ ನೀಡಲಿದೆ.

ವಿದ್ಯಾಸಿರಿ ಯೋಜನೆಯಡಿ ಸರ್ಕಾರದ ವಸತಿ ನಿಲಯಗಳಲ್ಲಿ ಪ್ರವೇಶ ದೊರಕದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವಾರ್ಷಿಕ 15,000 ರೂ. ನೀಡಲಾಗುತ್ತಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 3.6 ಲಕ್ಷ ವಿದ್ಯಾರ್ಥಿಗಳಿಗೆ 432 ಕೋಟಿ ರೂ.ಗಳ ನೆರವು ನೀಡಲಾಗಿತ್ತು. ಈ ಯೋಜನೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದರೆ, 2020-21,
2021-22 ಮತ್ತು 2022-23ರಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅನುಕೂಲವಾಗುವುದರಿಂದ ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು.

ಉನ್ನತ ಶಿಕ್ಷಣಕ್ಕೆ ಉತ್ತೇಜನ

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 24 ಲಕ್ಷ ವಿದ್ಯಾರ್ಥಿಗಳಿಗೆ 881 ಕೋಟಿ ರೂ.ಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21, 2021-22 ಮತ್ತು 2022-23ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷಿಸಿದ್ದು, ಈ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಪುನರ್‌ ಪ್ರಾರಂಭಿಸಲಿದೆ.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 17 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು ಈ ಕಾರ್ಯಕ್ರಮವನ್ನು 202೦-21, 2021-22 ಮತ್ತು 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಕಾರ್ಯಕ್ರಮವನ್ನು ಕೂಡ ನಮ್ಮ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಮುಂದುವರೆಸಲಿದೆ.

ಶುಚಿ ಸಂಭ್ರಮ ಕಿಟ್‌ ವಿತರಣೆ

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿದ್ದ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ನಿಲಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ʻಶುಚಿ ಸಂಭ್ರಮ ಕಿಟ್‌ʼ ನೀಡಲಾಗುತ್ತಿತು. ಮೈಸೋಪು, ಬಟ್ಟೆ ಸೋಪು, ಟೂತ್‌ ಪೇಸ್ಟ್, ಕೊಬ್ಬರಿ ಎಣ್ಣೆ ಒಳಗೊಂಡ ಈ ಕಿಟ್‌ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿತ್ತು. ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಯಲ್ಲಿ ಶುಚಿತ್ವದ ಪಾಠವನ್ನು ಬಾಲ್ಯದಿಂದಲೇ ಕಲಿಯಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21 ಮತ್ತು 2021-22 ಈ ಎರಡು ವರ್ಷಗಳಲ್ಲಿ ವಸತಿ ನಿಲಯಗಳಲ್ಲಿದ್ದ 3,31,712 ನಿಲಯಾರ್ಥಿಗಳಿಗೆ ʻಶುಚಿ ಸಂಭ್ರಮ ಕಿಟ್‌ʼ ಗಳನ್ನು ನೀಡಿರುವುದಿಲ್ಲ. ನಮ್ಮ ಸರ್ಕಾರವು ಎಲ್ಲಾ ನಿಲಯಾರ್ಥಿಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ʻಶುಚಿ ಸಂಭ್ರಮ ಕಿಟ್‌ʼ ಗಳನ್ನು ವಿತರಿಸಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 2,442 ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಇವುಗಳ ಸಮಗ್ರ ಬಲವರ್ಧನೆಗೆ ಕ್ರಮವಹಿಸಲಾಗುವುದು. ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು, ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.

ಸ್ವಯಂ ಉದ್ಯೋಗಕ್ಕೆ ಸಾಲ ಸಹಾಯಧನ

ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ಶೇ.20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ. ಗಳ ಸಾಲ ಸಹಾಯಧನವನ್ನು ವಾಣಿಜ್ಯ ಬ್ಯಾಂಕುಗಳ ಮುಖಾಂತರ ನೀಡಲಾಗುವುದು. ರಾಜ್ಯದ ಸೇವಾ ವಲಯದಲ್ಲಿ ಇರುವ ವಿಫುಲ ಅವಕಾಶಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2(ಎ) ಜಾತಿಗಳಿಗೆ ಸೇರಿದ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಪಡೆಯುವ 10 ಕೋಟಿ ರೂ.‌ ಗಳವರೆಗಿನ ಸಾಲಕ್ಕೆ ಶೇ.6 ರಷ್ಟು ಬಡ್ಡಿ ಸಹಾಯಧನವನ್ನು ನೀಡಲಾಗುವುದು.

ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು 2000ನೇ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಪರಿಶೀಲಿಸಿ, ಹಿಂದುಳಿದ ವರ್ಗಗಳ ಪ್ರವರ್ಗ-೧ ಮತ್ತು ಪ್ರವರ್ಗ-೨ಎ ನಲ್ಲಿ ಬರುವ ಜಾತಿಗಳಿಗೆ ಒಂದು ಕೋಟಿ ರೂ.ವರೆಗಿನ ನಿರ್ಮಾಣ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು.

ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದವರಾಗಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಖಾಂತರ ಕೈಗೊಳ್ಳಲು ಎರಡು ಕೋಟಿ ರೂ.ಗಳ ಅನುದಾನವನ್ನು ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+