ಕರ್ನಾಟಕದ ₹5,495 ಕೋಟಿ ಅನುದಾನಕ್ಕೆ ಕಲ್ಲು ಹಾಕಿತಾ ಕೇಂದ್ರ ಸರ್ಕಾರ?
ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಗಂಭೀರ ಆರೋಪವೂ ಕೇಳಿಬಂದಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಲ್ಲಿ ಅನ್ಯಾಯ ಮಾಡಿದೆ ಎಂಬ ಆರೋಪವನ್ನ ಖುದ್ದು ಮುಖ್ಯಮಂತ್ರಿ ಮಾಡಿದ್ದಾರೆ. ಇದು ಕರ್ನಾಟಕ ಬಜೆಟ್‌ಗೂ ಮುನ್ನ ಸುನಾಮಿ ಎಬ್ಬಿಸಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ ಕರ್ನಾಟಕಕ್ಕೆ ಮಾತ್ರ ಪ್ರತಿಬಾರಿ ಅನ್ಯಾಯ ಆಗುತ್ತಲೇ ಬಂದಿದೆ. ಈ ಅನ್ಯಾಯ ಇಂದು ಅಥವಾ ನಿನ್ನೆಯದ್ದಲ್ಲ, ಬಹುಶಃ ಕರ್ನಾಟಕ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದೇ ರೀತಿ ಮೋಸ ನಡೆಯುತ್ತಿದೆ. ಆದ್ರೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಮೋದಿ ಸರ್ಕಾರದ ವಿರುದ್ಧ ಕೂಡ ಆರೋಪ ಕೇಳಿಬಂದಿದೆ. ಅದು ಏನೆಂದರೆ, ವಿವಿಧ ರಾಜ್ಯಗಳಿಗೆ ವಿಶೇಷ ಅನುದಾನ ನೀಡಲು 15ನೇ ಕೇಂದ್ರ ಹಣಕಾಸು ಆಯೋಗ ಮೋದಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೇ ವಿಚಾರದಲ್ಲಿ ಈಗ ಕರ್ನಾಟಕ್ಕೆ ಅನ್ಯಾಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕಕ್ಕೆ ₹5,495 ಕೋಟಿ ಅನ್ಯಾಯ?
ಅಂದಹಾಗೆ 15ನೇ ಕೇಂದ್ರ ಹಣಕಾಸು ಆಯೋಗ ಮೋದಿ ಸರ್ಕಾರಕ್ಕೆ ಮಾಡಿದ್ದ ಶಿಫಾರಸು ರೀತಿ, ಕರ್ನಾಟಕದ ಪಾಲಿಗೆ 5,495 ಕೋಟಿ ರೂಪಾಯಿ ಕೊಡಲು ಸಲಹೆ ನೀಡಲಾಗಿತ್ತು. ಆದ್ರೆ ಕರ್ನಾಟಕ ತನ್ನ ಪಾಲಿಗೆ ಪಡೆಯಬೇಕಿದ್ದ 5,495 ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರ ಸರ್ಕಾರ ಅಡ್ಡಿ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಪರಿಷತ್‌ನಲ್ಲಿ ಆರೋಪ ಮಾಡಿದ್ರು. ಹಣಕಾಸು ಆಯೋಗದ ಶಿಫರಾಸನ್ನು ಪರಿಗಣಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಈಗ ರಾಜ್ಯ ಕಾಂಗ್ರೆಸ್ ಘಟಕ ಕೇಂದ್ರದ ವಿರುದ್ಧ ಗರಂ ಆಗಿದೆ.
'ಬಿಜೆಪಿಗರು ಈ ಅನ್ಯಾಯ ಪ್ರಶ್ನಿಸಿಯಾದರೂ...'
ಹೌದು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿ ಹೀಗೆ ಆಕ್ರೋಶ ಹೊರಹಾಕಿದೆ, ಕರ್ನಾಟಕಕ್ಕೆ 5,495 ಕೋಟಿ ವಿಶೇಷ ಅನುದಾನ ನೀಡುವ 15ನೇ ಹಣಕಾಸು ಆಯೋಗದ ಶಿಘಾರಸನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಹಣಕಾಸು ಆಯೋಗದ ಅನುದಾನದಲ್ಲಿ ವರ್ಷದಿಂದ ವರ್ಷಕ್ಕೆ ಕರ್ನಾಟಕದ ಪಾಲು ಕುಸಿಯುತ್ತಿದೆ. ಸುಳ್ಳಿನ ಪಟ್ಟಿ ನೀಡುವ @BJP4Karnataka ಗೆ ಕೇಂದ್ರದ ಅನ್ಯಾಯಗಳ ಪಟ್ಟಿ ಕೊಡುವ ಧೈರ್ಯವಿದೆಯೇ?' ಎಂದು ಪ್ರಶ್ನೆ ಮಾಡಿದೆ. ಇದರ ಜೊತೆಗೆ ಕೇಂದ್ರ ಕರ್ನಾಟಕಕ್ಕೆ ಸಾಲು ಸಾಲು ಅನ್ಯಾಯ ಮಾಡಿದೆ ಎಂದು ಆರೋಪಿಸಿದೆ.
'ಬಿಜೆಪಿಯ ಕೇಂದ್ರ ಸರ್ಕಾರ...'
ಇನ್ನು ಪದೇ ಪದೆ ಕಾಂಗ್ರೆಸ್ ಗ್ಯಾರಂಟಿಗಳಿಂದ ದೇಶ ಹಾಳಾಗುತ್ತದೆ, ರಾಜ್ಯ ಆರ್ಥಿಕವಾಗಿ ಬೀದಿಗೆ ಬೀಳುತ್ತೆ ಎಂದು ಹೇಳುವ ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಕೇಳಿದ್ದು 'ಅಕ್ಕಿ ಖರೀದಿಗೂ ಕಲ್ಲು ಹಾಕುತ್ತದೆ. ವಿಪತ್ತು ಪರಿಹಾರಕ್ಕೂ ಮಣ್ಣು ಹಾಕುತ್ತದೆ. GST ಹಂಚಿಕೆಯಲ್ಲೂ ಅನ್ಯಾಯ ಮಾಡುತ್ತದೆ. ಅನುದಾನ ಹಂಚಿಕೆಯಲ್ಲೂ ದ್ರೋಹ ಮಾಡುತ್ತದೆ. ಬಿಜೆಪಿಗರು ಈ ಅನ್ಯಾಯವನ್ನು ಪ್ರಶ್ನಿಸಿಯಾದರೂ ತಮ್ಮ ದುರಾಡಳಿತಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.' ಎಂದು ಕುಟುಕಿದೆ. ಈ ಮೂಲಕ ಕೇಂದ್ರ ಕರ್ನಾಟಕಕ್ಕೆ ಭಾರಿ ಅನ್ಯಾಯ ಮಾಡಿದೆ ಎಂಬ ಗಂಭೀರ ಆರೋಪವನ್ನ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಮಾಡಿದೆ. ಆದ್ರೆ ಈ ಬಗ್ಗೆ ಬಿಜೆಪಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಒಟ್ನಲ್ಲಿ ಇದೆಲ್ಲಾ ರಾಜಕೀಯ ಏನೇ ಇರಲಿ, ಆದರೆ ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೆ ಆ ವಿಚಾರ ಮಾತ್ರ ಖಂಡನೀಯ. ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಆರೋಪದ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ. ಅಲ್ಲದೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಸಿಗಬೇಕಿದೆ. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಇದ್ದರೂ, ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ ಪಕ್ಕಾ ಎಂಬ ಆರೋಪವನ್ನು ಸಾಬೀತು ಮಾಡಿದಂತಾಗುತ್ತದೆ.












Click it and Unblock the Notifications