ಕರ್ನಾಟಕ ಬಜೆಟ್ - 2022: ದೇವರ ಇಲಾಖೆಗೆ ಬಂಪರ್ ಘೋಷಣೆಗಳು
ಬೆಂಗಳೂರು, ಮಾರ್ಚ್ 4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 2,53,165 ಕೋಟಿ ರೂ. ಬಜೆಟ್ ಮಂಡನೆ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರವನ್ನು ಹೊಂದಿದೆ.
ರಾಜ್ಯ ಬಜೆಟ್ ನಲ್ಲಿ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮದಾಯ (ಮುಜರಾಯಿ) ಇಲಾಖೆಗೆ ಹಲವು ಪ್ರಮುಖ ಘೋಷಣೆಗಳನ್ನು ವಿತ್ತ ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿಯವರು ಮಾಡಿದ್ದಾರೆ. ಇಲಾಖೆಯ ಪ್ರಮುಖ ಘೋಷಣೆಯ ಹೈಲೆಟ್ಸ್:
> ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಆನೆ ಬಲ ತುಂಬಿದ ಬಜೆಟ್ ಇದಾಗಿದೆ.

> ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ ಸಂಕೀರ್ಣ ನಿರ್ಮಾಣಕ್ಕೆ ಎರಡು ಹಂತದಲ್ಲಿ 85 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು, ಮೊದಲ ಹಂತದಲ್ಲಿ 45 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
> ಪಂಡರಾಪುರದಲ್ಲೂ ಅತಿಥಿಗೃಹವನ್ನು ಅಭಿವೃದ್ದಿ ಪಡಿಸಲು ಘೋಷಿಸಲಾಗಿದೆ.
> ಪುಣ್ಯಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಕೆ.ಎಸ್.ಟಿ.ಡಿ.ಸಿ ವತಿಯಿಂದ ರಿಯಾಯಿತಿ ದರದಲ್ಲಿ ಪ್ಯಾಕೇಜುಗಳನ್ನು ರೂಪಿಸಲಾಗುವುದು.
> ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆಯನ್ನು 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5,000 ರೂಗಳ ಸಹಾಯಧನ ನೀಡುವುದನ್ನ ಘೋಷಿಸಲಾಗಿದೆ.
> ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ, ಅಭಿವೃದ್ದಿ ಕಾಮಗಾರಿಗಳ ವಿವೇಚನೆಯನ್ನು ದೇವಾಲಯಗಳಿಗೆ ಪ್ರತ್ಯಾಯೋಜಿಸಲು ಕಾನೂನು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಘೋಷನೆ ನೀಡಲಾಗಿದೆ.
> ಚಾಮುಂಡಿ ಬೆಟ್ಟ, ಮುಳ್ಳಯನಗಿರಿ, ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡಲಿದೆ.
> ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ದಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ.
> ಬಹುದಿನಗಳ ಬೇಡಿಕೆಯಾಗಿದ್ದ ತಸ್ತೀಕ್ ಹಣವನ್ನು 48 ಸಾವಿರಗಳಿಂದ 60 ಸಾವಿರಗಳಿಗೆ ಹೆಚ್ಚಿಸಲಾಗಿದೆ.
> ಪ್ರಧಾನಿ ನರೆಂದ್ರ ಮೋದಿ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಲಾಖೆಯ ದೇವಾಲಯಗಳಲ್ಲಿ ಪಾರದರ್ಶಕತೆ, ದೇವಾಲಯದ ಹಣಕಾಸಿನ ಉತ್ತರದಾಯಿತ್ವ, ಡಿಜಿಟಲ್ ಪೇಮೆಂಟ್ಸ್ ಸೌಲಭ್ಯ, ಇತಿಹಾಸ, ಸೇವಾ ವಿವರ, ಉತ್ಸವ ಇತ್ಯಾದಿ ಮಾಹಿತಿಗಳನ್ನು ಆನ್‍ಲೈನ್ ಮುಖಾಂತರ ಭಕ್ತಾಧಿಗಳಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಐ.ಟಿ.ಎಂ.ಎಸ್ (Integrated Temple Management System) ತಂತ್ರಾಂಶ ಅನುಷ್ಠಾನ.












Click it and Unblock the Notifications