ಲೋಕಸಭೆ ಚುನಾವಣೆ 2019 : ಸಂಕ್ರಾಂತಿ ಬಳಿಕ ಬಿಜೆಪಿ ಸರಣಿ ಸಮಾವೇಶ
ಬೆಂಗಳೂರು, ಡಿಸೆಂಬರ್ 21 : ಕರ್ನಾಟಕ ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಸಂಕ್ರಾಂತಿ ಬಳಿಕ ಸರಣಿ ಸಮಾವೇಶಗಳನ್ನು ಆರಂಭಿಸಲಿದೆ. ಪಕ್ಷದ ಹೈಕಮಾಂಡ್ 'ಮಿಷನ್ 24' ಗುರಿಯನ್ನು ರಾಜ್ಯ ನಾಯಕರಿಗೆ ನೀಡಿದೆ.
ಗುರುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಸರಣಿ ಸಮಾವೇಶ, ಬೈಕ್ ಜಾಥಾಗಳನ್ನು ಆಯೋಜನೆ ಮಾಡಲಾಗುತ್ತದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಹೈಕಮಾಂಡ್ ನಾಯಕರು ಸಭೆ ನಡೆಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು 70 ಅಂಶಗಳನ್ನು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದ್ದಾರೆ.
2019ರ ಫೆಬ್ರವರಿಯಲ್ಲಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಗಳು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಉಳಿದ ಸಮಾವೇಶಗಳಲ್ಲಿ ವಿವಿಧ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ...

ಮಿಷನ್ 24 ಗುರಿ
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಮಿಷನ್ 24 ಗುರಿಯೊಂದಿಗೆ ಬಿಜೆಪಿ ಚುನಾವಣಾ ತಯಾರಿಯನ್ನು ಆರಂಭಿಸಲಿದೆ. ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಹೆಚ್ಚಿನ ಸಮಾವೇಶಗಳಲ್ಲಿ ಪಾಲ್ಗೊಂಡರೆ ಈ ಗುರಿ ತಲುಪಲು ಸಹಕಾರಿಯಾಗಲಿದೆ ಎಂಬುದು ನಾಯಕರ ಅಭಿಪ್ರಾಯ.

6 ಅಥವ 8 ಸಮಾವೇಶಗಳು
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಶಕ್ತಿ ಕೇಂದ್ರಗಳ ಪಾತ್ರ ಮಹತ್ವದ್ದು. ಶಕ್ತಿ ಕೇಂದ್ರಗಳಿಗೆ ಇನ್ನಷ್ಟು ಬಲ ತುಂಬಲು ಸಮಾವೇಶಗಳನ್ನು ನಡೆಸಲಾಗುತ್ತದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಸೇರಿಸಿ 6 ಅಥವ 8 ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

80 ಸಾವಿರ ಜನರನ್ನು ಸೇರಿಸುವ ನಿರೀಕ್ಷೆ
ಯುವ ಮೋರ್ಚಾ, ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ, ಪಂಗಡದ ಮೋರ್ಚಾ, ಒಬಿಸಿ ಮೋರ್ಚಾಗಳು ಜನವರಿ 15ರ ಬಳಿಕ ಸರಣಿ ಸಮಾವೇಶಗಳನ್ನು ಆಯೋಜಿಸಿವೆ. ಈ ಸಮಾವೇಶಗಳಿಗೆ 40 ರಿಂದ 80 ಸಾವಿರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ.

ಅಮಿತ್ ಶಾ ಆಗಮನ
ಶಕ್ತಿ ಕೇಂದ್ರಗಳ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿಯಲ್ಲಿ ನಡೆಯುವ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ವಿವಿಧ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಸಮಾವೇಶಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶಾಸಕರ ಜೊತೆ ಅಮಿತ್ ಶಾ ಸಭೆ
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಾಸಕರ ಸಭೆಯನ್ನು ಕರೆದಿದ್ದಾರೆ. ರಾಜ್ಯದ 104 ಬಿಜೆಪಿ ಶಾಸಕರು ಜನವರಿ 11 ಮತ್ತು 12ರಂದು ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣೆ ಗೆಲ್ಲಲು ರೂಪಿಸಬೇಕಾದ ತಂತ್ರಗಳ ಬಗ್ಗೆ ಶಾಸಕರಿಗೆ ಅಮಿತ್ ಶಾ ಸೂಚನೆಗಳನ್ನು ನೀಡಲಿದ್ದಾರೆ.












Click it and Unblock the Notifications