ಬಿಜೆಪಿ ರಾಜ್ಯ ಪದಾಧಿಕಾರಿಗಳ ನೇಮಕದ ಅಸಲಿಯತ್ತೇನು?
ಬೆಂಗಳೂರು, ಸೆಪ್ಟೆಂಬರ್ 23: ಆರು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಚುನಾವಣೆ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ್ದ ಪ್ರಹ್ಲಾದ್ ಜೋಶಿ ಅವರು ಕೊನೆಗೂ ರಾಜ್ಯ ಘಟಕವನ್ನು ಪುನಾರಚಿಸಿ, ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ನಾಯಕರು ಬಿಜೆಪಿಗೆ ಮರಳಲು ಸಿದ್ಧತೆ ನಡೆಸಿರುವ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ ಎಂದು ಭಾವಿಸಲಾಗಿದೆ.
ಆದರೆ ವಸ್ತುಸ್ಥಿತಿ ಭಿನ್ನವಾಗಿದೆ. ಪಕ್ಷಕ್ಕೆ ಮರಳಲು ಮೀನಮೇಷವೆಣಿಸುತ್ತಾ, ಷರತ್ತುಗಳನ್ನು ಹಾಕುತ್ತಿರುವ ಯಡಿಯೂರಪ್ಪಗೆ ಚಿಕ್ಕ ಜರ್ಕ್ ನೀಡುವುದು ರಾಜ್ಯ ಬಿಜೆಪಿ ನಾಯಕರ ಇರಾದೆ ಸ್ವಲ್ಪಮಟ್ಟಿಗೆ ಇದ್ದರೂ ಇರಬಹುದು. ಆದರೆ ವಾಸ್ತವವಾಗಿ ವಿಧಾನಸಭೆ ಚುನಾವಣೆ, ಆ ನಂತರ ಪಕ್ಷದ ಹೀನಾಯ ಸೋಲು, ಆ ಬಳಿಕವೂ ಬಂಡಾಯದ ಹೊಗೆ ಕಾಣಿಸಿಕೊಳ್ಳಬಹುದೆಂಬ ಆತಂಕದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಪದಾಧಿಕಾರಿಗಳ ನಾಮಕರಣವನ್ನು ಮುಂದೂಡುತ್ತಾ ಬಂದಿದ್ದರು.

ಆದರೆ ಪಕ್ಷದಲ್ಲಿನ ವಾತಾವರಣ ಈಗ ಸ್ವಲ್ಪಮಟ್ಟಿಗೆ ತಿಳಿಯಾಗಿದೆ. ಅದರಲ್ಲೂ ನರೇಂದ್ರ ಮೋದಿ ಅವರು ಪಕ್ಷದ ಪ್ರಧಾನಿ ಅಬ್ಯರ್ಥಿಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲೂ ನವೋತ್ಸಾಹ ಕಂಡುಬಂದಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಗಾದರೂ ಒಗ್ಗಟ್ಟಿನಿಂದ ಭರ್ಜರಿ ಸಿದ್ಧತೆಯಲ್ಲಿ ತೊಡಗೋಣವೆಂದು ಎಣಿಸಿದ ಜೋಶಿ, ಹಿರಿಯ ನಾಯಕರ ಸಮ್ಮತಿ ಪಡೆದು ರಾಜ್ಯ ಪದಾಧಿಕಾರಿಗಳ ಪುನಾರಚನೆ ಶಾಸ್ತ್ರ ಮಾಡಿಮುಗಿಸಿದ್ದಾರೆ.
ಈ ಮಧ್ಯೆ, ದಿಢೀರಂತ (?) ಯಡಿಯೂರಪ್ಪ ವಾಪಸಾದರೆ ಅವರ ಜತೆಗೆ ಬರುವ ಪಟಾಲಂಗೆ ಯಾವುದೇ ಸ್ಥಾನ ಕಲ್ಪಿಸುವುದಿಲ್ಲವೇ? ಎಂಬ ಆತಂಕ ಕೆಜೆಪಿ ನಾಯಕರ ಮನದಲ್ಲಿ ಮನೆ ಮಾಡಿದೆ.
ಒಂದೊಮ್ಮೆ ಯಡಿಯೂರಪ್ಪ ಅವರು ವಾಪಸಾಗುತ್ತಿದ್ದಂತೆ ತಮ್ಮ ಹತ್ತಾರು ಬೆಂಬಲಿಗರಿಗೆ ಪಕ್ಷದ ಸಂಘಟನೆಯಲ್ಲಿ ಸ್ಥಾನಮಾನ ನೀಡುವಂತೆ ಬೇಡಿಕೆ ಮುಂದಿಟ್ಟರೆ ಆಗಿನ ರಾಜಕೀಯ ಲೆಕ್ಕಾಚಾರಕ್ಕೆ ಅನುಗುಣವಾಗಿ ಹೊಸದಾಗಿ ನಿರ್ಣಯ ಕೈಗೊಂಡರಾಯಿತು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ. ಈ ಮಧ್ಯೆ ಹೊಸದಾಗಿ ನೇಮಗೊಂಡಿರುವ ಪದಾಧಿಕಾರಿಗಳು ಅತಂತ್ರದ ಮಡುವಿಗೆ ತಳ್ಳಲ್ಪಟ್ಟಿದ್ದಾರೆ.
ಪ್ರಸ್ತುತ ಪ್ರಹ್ಲಾದ್ ಜೋಶಿ ನೇತೃತ್ವದ ಕರ್ನಾಟಕ ಬಿಜೆಪಿ ತಂಡ ಹೀಗಿದೆ:
ಉಪಾಧ್ಯಕ್ಷರು- ಎ.ಆರ್.ಕೃಷ್ಣಮೂರ್ತಿ, ಎಂ.ಬಿ.ಭಾನುಪ್ರಕಾಶ್, ವಿ.ಸೋಮಣ್ಣ, ಹಾಲಪ್ಪ ಬಸಪ್ಪಾಚಾರ್, ಮಾ.ನಾಗರಾಜ್, ಬಿ.ಎನ್.ವಿಜಯಕುಮಾರ್, ವಿ.ಸುನೀಲ್‌ಕುಮಾರ್, ಸುಲೋಚನಾ ಭಟ್, ರೀನಾ ಪ್ರಕಾಶ್, ರೇಖಾ ಹುಲಿಯಪ್ಪಗೌಡ.
ಪ್ರಧಾನ ಕಾರ್ಯದರ್ಶಿಗಳು- ಸಿ.ಟಿ.ರವಿ, ರಘುನಾಥರಾವ್ ಮಲ್ಕಾಪುರೆ, ನಿರ್ಮಲಕುಮಾರ್ ಸುರಾನಾ, ಸೋಮಣ್ಣ ಬೇವಿನಮರದ. ಸಂಘಟನಾ ಪ್ರಧಾನ ಕಾರ್ಯದರ್ಶಿ- ಬಿ.ಎಲ್.ಸಂತೋಷ್.
ಕಾರ್ಯದರ್ಶಿಗಳು- ಎಂ.ಬಿ.ನಂದೀಶ್, ಮಹಂತೇಶ್ ಕವಟಗಿಮಠ, ಸಿದ್ದರಾಜು, ಪ್ರಕಾಶ್ ಖಂಡ್ರೆ, ಶಿವಾನಂದ ಕಲ್ಲೂರು, ಪದ್ಮಾ ಚಂದ್ರು, ಭಾರತಿ ಜಂಭಗಿ, ಶ್ಯಾಮಲಾ ಕುಂದರ್, ಸುಧಾ ಜಯರುದ್ರೇಶ್.
ಖಜಾಂಚಿ- ಗೋಪಿನಾಥರೆಡ್ಡಿ, ಸಹ ಖಜಾಂಚಿ- ಎಸ್.ಕೇಶವರಾವ್, ವಕ್ತಾರ- ಅಶ್ವಥ್‌ನಾರಾಯಣ.
ಮೋರ್ಚಾಗಳ ರಾಜ್ಯಾಧ್ಯಕ್ಷರು- ಪಿ.ಮುನಿರಾಜು (ಯುವಮೋರ್ಚಾ), ಶಶಿಕಲಾ ಜೊಲ್ಲೆ (ಮಹಿಳಾ ಮೋರ್ಚಾ), ಎ.ನಾರಾಯಣಸ್ವಾಮಿ (ಎಸ್‌ಸಿ ಮೋರ್ಚಾ), ಸೋಮಲಿಂಗಪ್ಪ (ಎಸ್‌ಟಿ ಮೋರ್ಚಾ). ಅರಗ ಜ್ಞಾನೇಂದ್ರ (ರೈತ ಮೋರ್ಚಾ), ಡಾ.ಎನ್.ಎಫ್.ಮೊಹಿಸಿನ್ (ಅಲ್ಪಸಂಖ್ಯಾತ ಮೋರ್ಚಾ), ನಾಗೇಂದ್ರ (ಸ್ಲಂ ಮೋರ್ಚಾ).












Click it and Unblock the Notifications