ಮೋದಿ ಹೆಸರಲ್ಲಿ ಹಾಲಶ್ರೀ ಹಣ ವಸೂಲಿ ಪ್ರಕರಣ: ವಂಚಕರು ಮೋದಿ ಹೆಸರನ್ನೇ ಬಳಸುವುದೇಕೆ? ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಸೆಪ್ಟೆಂಬರ್ 22: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಹಾಲಶ್ರೀ ಮಠದ ಸ್ವಾಮೀಜಿ ಪ್ರಧಾನಿ ಮೋದಿ ಹೆಸರಲ್ಲಿ ಹಣ ವಸೂಲಿ ಮಾಡಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ವಂಚಕರು ಮೋದಿ ಹೆಸರನ್ನೇ ಬಳಸುವುದೇಕೆ ಎಂದು ಪ್ರಶ್ನಿಸಿದೆ.
'ವಂಚಕರಿಗೆ, ಭ್ರಷ್ಟಾಚಾರಿಗಳಿಗೆ, ಅತ್ಯಾಚಾರಿಗಳಿಗೆ ಮೋದಿ ಹೆಸರೇ ಪ್ರಿಯವಾಗುವುದೇಕೆ? ವಂಚಕರು ಮೋದಿ ಹೆಸರನ್ನೇ ಬಳಸುವುದೇಕೆ? ಫ್ರಿಡಂ 251 ಮೊಬೈಲ್ ವಂಚಕರೂ ಮೋದಿ ಹೆಸರನ್ನೇ ಬಳಸಿ ಟೋಪಿ ಹಾಕಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

'ಟಿಕೆಟ್ ಹಗರಣದ ಸ್ವಾಮಿಯೂ ಮೋದಿ ಹೆಸರನ್ನೇ ಬಳಸಿ ಟೋಪಿ ಹಾಕಿದ್ದಾನೆ. ಮೋದಿ ಹೆಸರು ಎಂದರೆ ವಂಚನೆಗೆ ಸಿಗುವ ಲೈಸೆನ್ಸ್ ಆಗಿದೆಯೇ ಬಿಜೆಪಿ?' ಎಂದು ಕೆಪಿಸಿಸಿ ಕೇಳಿದೆ.
'ಬಿಜೆಪಿ ಅಂದರೆ ರಾಜಕೀಯ ಪಕ್ಷ ಎಂದುಕೊಂಡಿದ್ದರೆ ತಪ್ಪು, ಅದೊಂದು ಹಫ್ತಾ ವಸೂಲಿಯ ಗ್ಯಾಂಗ್. ಮೇಲಿನವರು ಸಿಎಂ ಹುದ್ದೆಗೆ, ಮಂತ್ರಿಗಿರಿಗೆ ವಸೂಲಿ ಮಾಡುತ್ತಾರೆ. ಕೆಳಗಿನವರು ಟಿಕೆಟ್ ಹಂಚಿಕೆಗೆ ವಸೂಲಿ ಮಾಡುತ್ತಾರೆ' ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಡಿದೆ.
'ಅಧಿಕಾರದಲ್ಲಿ ಕೂತರೆ ಶೇ 40 ಕಮಿಷನ್ ವಸೂಲಿ ಮಾಡುತ್ತಾರೆ. ಸಣ್ಣ ಪುಟ್ಟ ಬಿಜೆಪಿ ಮುಖಂಡರು ಬೆದರಿಸಿ ಸುಲಿಗೆ ಮಾಡುತ್ತಾರೆ. ಸುಲಿಗೆಯೇ ಬಿಜೆಪಿಯ ಧರ್ಮ. ಅಧಿಕಾರ ವಂಚಿತ ಬಿಜೆಪಿಗೆ ಈಗ ಶೇ 40 ವಸೂಲಿಗೆ ಅವಕಾಶವಿಲ್ಲ, ಹಾಗಾಗಿ ತಮ್ಮ ರೌಡಿ ಮೋರ್ಚಾದ ಮೂಲಕ ಜನರ ದರೊಡೆಗೆ ಇಳಿದಿದೆ' ಎಂದು ಆರೋಪಿಸಿದೆ.
ಕೆಎಸ್ ಈಶ್ವರಪ್ಪ ವಿರುದ್ಧ ಆಕ್ರೋಶ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಬ್ಬ ನೀರಿನ ಕಳ್ಳ, ಅಯೋಗ್ಯ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಅತೃಪ್ತ ಆತ್ಮದಂತೆ ಬಡಬಡಿಸುತ್ತಿರುವ ಕೆಎಸ್ ಈಶ್ವರಪ್ಪ ಅವರೇ, ಯೋಗ್ಯರು ಯಾರು, ಅಯೋಗ್ಯರು ಯಾರು ಅಂತ ರಾಜ್ಯದ ಜನ ತೀರ್ಮಾನಿಸಿ ತೀರ್ಪು ಕೊಟ್ಟಾಗಿದೆ' ಎಂದು ಟ್ವೀಟ್ ಮಾಡಿದೆ.
'ನಿಮ್ಮ ಪಕ್ಷ ನಿಮಗೆ ಟಿಕೆಟ್ ನಿರಾಕರಿಸಿ ಮನೆಯಲ್ಲಿ ಕೂರಿಸಿದ್ದು ಯೋಗ್ಯನೆಂದೋ, ಅಯೋಗ್ಯನೆಂದೋ ದಶಕಗಳ ಕಾಲ ತಾವು ಮಣ್ಣು ಹೊತ್ತರೂ ನಿಮ್ಮನ್ನು ಸಿಎಂ ಮಾಡದೆ ನಿಮ್ಮ ಮುಂದೆ ಬೆಳೆದವರಿಗೆ ಮಣೆ ಹಾಕಿದ್ದು ತಾವು ಯೋಗ್ಯನೆಂದೋ, ಅಯೋಗ್ಯನೆಂದೋ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ನಿಮ್ಮ ಪಕ್ಷ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡು, ಅದೆಷ್ಟೇ ಬಡಿದಡಿದರೂ ಮಂತ್ರಿ ಮಾಡದೆ ಮನೆಯಲ್ಲಿ ಕೂರಿಸಿದ್ದು 40 ಪರ್ಸೆಂಟ್ ಕಳ್ಳನೆಂದೋ ಅಥವಾ ಅಯೋಗ್ಯನೆಂದೋ?' ಎಂದು ಕೇಳಿದೆ.
'ತಮ್ಮ ಮನೆಯಲ್ಲಿ ನೋಟ್ ಎಣಿಸುವ ಯಂತ್ರ ಇಟ್ಟುಕೊಂಡಿದ್ದು 40 ಪರ್ಸೆಂಟ್ ಕಳ್ಳತನಕ್ಕೋ ಅಥವಾ ಲೆಕ್ಕ ಬಾರದ ಅಯೋಗ್ಯತನಕ್ಕೋ?' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.












Click it and Unblock the Notifications