ವಿರೋಧ ಪಕ್ಷದ ನಾಯಕನ ಆಯ್ಕೆಗೆ ದಿನಾಂಕ ಫಿಕ್ಸ್; ಸಂಭವನೀಯ ಹೆಸರುಗಳು ಇಲ್ಲಿವೆ
ಬೆಂಗಳೂರು, ನವೆಂಬರ್ 11: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರ ಶಾಸಕರಾದ ಬಿ ವೈ ವಿಜಯೇಂದ್ರ ಅವರನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ರಾಜ್ಯ ಬಿಜೆಪಿಗೆ ಹೊಸ ಸಾರಥಿ ಸಿಕ್ಕಂತಾಗಿದೆ. ಇದೀಗ ವಿರೋಧ ಪಕ್ಷದ ನಾಯಕನ ಯಾವಾಗ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಹೌದು, ಲೋಕಸಭಾ ಚುನಾವಣೆ ಹಾಗೂ ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷದ ಆಯ್ಕೆಗೆ ಇದೀಗ ಮುಂದಾಗಿದೆ. ಬಿಜೆಪಿ ಯಾವುದೇ ಹುದ್ದೆಗಳಿಗೆ ನೇಮಕ ಮಾಡುವ ಮೊದಲು ಜಾತಿ ಸಮೀಕರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಅದರಂತೆ ಈಗಾಗಲೇ ಲಿಂಗಾಯತ ಸಮುದಾಯವನ್ನ ಪರಿಗಣಿಸಿ ಲಿಂಗಾಯತ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನ ನೀಡಲಾಗಿದೆ.

ಇನ್ನೂ ವಿರೋಧ ಪಕ್ಷ ನಾಯಕ ಆಯ್ಕೆ ಹೈಕಮಾಂಡ್ ಗೆ ಕಗ್ಗಟ್ಟಾಗಿದ್ದು, ಈ ಹುದ್ದೆಗೆ ಒಕ್ಕಲಿಗರು ಮತ್ತು ಒಬಿಸಿ ನಾಯಕರಿಗೆ ಪ್ರಾತಿನಿಧ್ಯವನ್ನು ನೀಡುವ ನಿರೀಕ್ಷೆಯಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಬಿಜೆಪಿ ಹೈಕಮಾಂಡ್ ನವೆಂಬರ್ 17 ರಂದು ವಿಧಾನಸಭೆ ಪ್ರತಿಪಕ್ಷ ನಾಯಕರ ಹೆಸರನ್ನು ಘೋಷಿಸಲು ನಿರ್ಧರಿಸಿದೆ.
ಲಿಂಗಾಯತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿದ ನಂತರ, ಪಕ್ಷವು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕನನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎನ್ನಲಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ, ರಾಜ್ಯಾಧ್ಯಕ್ಷರ ಆಯ್ಕೆಗೆ ಬರೋಬ್ಬರಿ ಆರು ತಿಂಗಳು ತೆಗೆದುಕೊಂಡ ಬಿಜೆಪಿ ಹೈಕಮಾಂಡ್. ಇದೀಗ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ನೇಮಕಕ್ಕೆ ವೇದಿಕೆ ಸಜ್ಜಾಗಿದೆ.

ನವೆಂಬರ್ 17 ರಂದು ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೈಕಮಾಂಡ್ ಕಳುಹಿಸಿದ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ. ಅಲ್ಲದೇ ಶುಕ್ರವಾರ ಸಂಜೆ ಸಭೆ ನಿಗದಿಯಾಗಿದ್ದು, ಅದೇ ದಿನ ವಿರೋಧ ಪಕ್ಷದ ನಾಯಕರ ಹೆಸರನ್ನು ಹೈಕಮಾಂಡ್ ಪ್ರಕಟಿಸುವ ನಿರೀಕ್ಷೆ ಇದೆ.
ಜಾತಿ ಲೆಕ್ಕಾಚಾರ!
ಲಿಂಗಾಯತ ಸಮುದಾಯದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಹೈಕಮಾಂಡ್ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ವಿವಿಧ ಸಮುದಾಯಗಳ ಪ್ರತಿಪಕ್ಷ ನಾಯಕರನ್ನು ನೇಮಿಸುವ ಸಾಧ್ಯತೆ ಇದೆ. ಪ್ರತಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಹೈಕಮಾಂಡ್ ನಿರ್ಧರಿಸಿದರೆ, ಮಾಜಿ ಸಚಿವರಾದ ಡಾ.ಅಶ್ವಥ್ ನಾರಾಯಣ್, ಆರ್.ಅಶೋಕ ಮತ್ತು ಆರಗ ಜ್ಞಾನೇಂದ್ರ ಅವರು ಮುಂಚೂಣಿಯಲ್ಲಿದ್ದಾರೆ. ಒಬಿಸಿ ನಾಯಕರಿಗೆ ಪ್ರಾತಿನಿಧ್ಯ ನೀಡಲು ಪಕ್ಷ ನಿರ್ಧರಿಸಿದರೆ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಪ್ರಮುಖ ಆಯ್ಕೆಯಾಗಬಹುದು.
ಒಕ್ಕಲಿಗ ಬೆಂಬಲಿತ ಜೆಡಿಎಸ್ ಜತೆಗಿನ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತರಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳಲು ಪಕ್ಷ ನಿರ್ಧರಿಸಿದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ನಿರ್ಣಾಯಕ ಸ್ಥಾನ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದರೆ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಬ್ರಾಹ್ಮಣರು ಕೂಡ ರೇಸ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ವಿಷಯಕ್ಕೆ ಬಂದರೆ, ಪಕ್ಷವು ಒಕ್ಕಲಿಗ ಮತ್ತು ಮಹಿಳೆ ವರ್ಗದ ಅಡಿಯಲ್ಲಿ ಎಂಎಲ್ಸಿ ತೇಜಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಬಹುದು. ಒಬಿಸಿ ನಾಯಕನನ್ನು ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದರೆ, ಕೋಟಾ ಶ್ರೀನಿವಾಸ ಪೂಜಾರಿಗೆ ಮತ್ತೊಮ್ಮೆ ಅವಕಾಶ ಸಿಗಬಹುದು ಎನ್ನಲಾಗಿದೆ.












Click it and Unblock the Notifications