ಶಾಲೆ ರೇಪ್ ಕೇಸ್, ಆರೋಪಿ ವಿರುದ್ಧ ಗೂಂಡಾ ಕಾಯ್ದೆ
ಬೆಂಗಳೂರು, ಜು. 21 : ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಸೋಮವಾರ ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚೆ ನಡೆಯಿತು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅಗತ್ಯವಿರುವ ಕಾನೂನು ತಿದ್ದುಪಡಿಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು.
ಸೋಮವಾರದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಅತ್ಯಾಚಾರ ಪ್ರಕರಣದ ಬಗ್ಗೆ ಸದನದಲ್ಲಿ ಮೊದಲು ಚರ್ಚೆಯಾಗಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ವಿಬ್ ಗಯಾರ್ ಶಾಲೆಯ ಮುಖ್ಯಸ್ಥರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಗದೀಶ್ ಶೆಟ್ಟರ್ ಮಾತಿಗೆ ಉತ್ತರ ನೀಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ವಿಬ್ ಗಯಾರ್ ಶಾಲೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಶಾಲೆಯ ಮುಖ್ಯಸ್ಥ ರುಸ್ತು ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. [ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಬಂಧನ]
ನಂತರ ಮಾತನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಅಗತ್ಯವಿರುವ ಎಲ್ಲಾ ಕಾನೂನು ತಿದ್ದುಪಡಿಯನ್ನು ಮಾಡಲು ಸರ್ಕಾರ ಸಿದ್ಧವಿದೆ. ಶಾಲೆಯಲ್ಲಿ 1 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಪರಿಷತ್ತಿನಲ್ಲೂ ಪ್ರಸ್ತಾಪ : ವಿಧಾನಪರಿಷತ್ತಿನಲ್ಲಿಯೂ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಕಲಾಪ ಆರಂಭವಾದ ತಕ್ಷಣ ಮನವಿ ಮಾಡಿದರು.
ಈಶ್ವರಪ್ಪ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರಾದ ತಾರಾ ಅನುರಾಧ, ರಾಮಚಂದ್ರೇಗೌಡ ಮುಂತಾದವರು ಸಹ ಈ ಕುರಿತು ಸದನದಲ್ಲಿ ಚರ್ಚೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಗಿ, ಕಲಾಪವನ್ನು ಅರ್ಧಗಂಟೆಗಳ ಕಾಲ ಮುಂಡೂಡಲಾಯಿತು.












Click it and Unblock the Notifications