ಬಿಎಸ್‌ವೈ ಭೇಟಿಯಾದ ಸಚಿವ ನಾರಾಯಣ ಗೌಡ: ಸಂಧಾನ ಯಶಸ್ವಿಯಾಯ್ತ? ಇಲ್ಲಿದೆ ಇನ್‌ಸೈಡ್ ಮಾಹಿತಿ!
ಬೆಂಗಳೂರು,ಮಾರ್ಚ್23: ರಾಜ್ಯ ವಿಧಾನಸಭಾ ;ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಈಗಾಗಲೇ ಬಿಜೆಪಿ ಇಬ್ಬರು ಸಚಿವರು ಹಾಗೂ ಒಬ್ಬಬ ಶಾಸಕಿ ಸೇರಿದಂತೆ ಹಲವು ನಾಯಕರು ಬಿಜೆಪಿಯನ್ನ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿವೆ.
ಈಗಾಗಲೇ ಬಿಜೆಪಿಯಿಂದ ಸ್ವಲ್ಪ ಅಂತರವನ್ನ ಕಾಯ್ದುಕೊಂಡಿದ್ದ ಸಚಿವ ನಾರಾಯಣ ಗೌಡರು, ಮಂಡ್ಯದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದು, ಇದೀಗ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರುವ ಸುಳಿವು ನೀಡಿದ್ದ ನಾರಾಯಣಗೌಡ ಇದೀಗ ಮತ್ತೆ ಬಿಜೆಯಲ್ಲೇ ಇರಲಿದ್ದಾರೆ.

ಹೌದು, ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರನ್ನ ಯುಗಾದಿ ಹಬ್ಬದಂದು ಭೇಟಿಯಾಗಿ ಮಾತುಕತೆ ನಡೆಸಿರುವ ಸಚಿವ ನಾರಾಯಣ ಗೌಡರು, ಬಿ ಎಸ್ ಯಡಿಯೂರಪ್ಪ ಅವರ ಮುಂದೆ ಅಸಮಾಧಾನವನ್ನ ಹೊರಹಾಕಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲವನ್ನ ಅರಳಿಸಿದ್ದ ನಾರಾಯಣ ಗೌಡರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ನಾರಾಯಣಗೌಡರಿಗೆ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ಈ ಕುರಿತು ಅಸಮಾಧಾನಗೊಂಡಿರುವ ನಾರಾಯಣಗೌಡರು ಕಮಲ ಬಿಟ್ಟು ಕೈ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗಿತ್ತು.
ಈಗಾಗಲೇ ಕಳೆದ ಭಾನುವಾರ ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಜೊತೆ ನಾರಾಯಣ ಗೌಡರು ಮಾತನಾಡಿಕೊಂಡು ಬಂದಿದ್ದಾರೆ. ಅಮಿತ್ ಶಾ ಭೇಟಿಯಾದ ಬಳಿಕ ಬುಧುವಾರ ಬಿ.ಎಸ್.ಯಡಿಯೂರಪ್ಪನವರನ್ನೂ ಸಹ ನಾರಾಯಣ ಗೌಡ ಭೇಟಿಯಾಗಿದ್ದು, ಯುಗಾದಿ ಶುಭಾಶಯ ಹೇಳಿ ಬಂದಿದ್ದಾರೆ. ಬಿ ಎಸ್ ಯಡಿಯೂರಪ್ಪ ನವರನ್ನ ನಂಬಿ ಜೆಡಿಎಸ್ ಬಿಟ್ಟು ಬಂದಿದ್ದ ನಾರಾಯಣ ಗೌಡರು ಇದೀಗ ಬಿಎಸ್ವೈ ಜೊತೆಗೆ ಮಾತುಕತೆ ನಡೆಸಿದ ಬಳಿಕ ಅವರು ಕೊಟ್ಟ ಭರವಸೆಯ ಬಳಿಕ ಕಾಂಗ್ರೆಸ್ ಗೆ ಹೋಗುವುದನ್ನ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಇನ್ನೂ ಸಿಕ್ಕಿರುವ ಮಾಹಿತಿ ಪ್ರಕಾರ ನಾರಾಯಣಗೌಡರು ಕೆ.ಆರ್.ಪೇಟೆಯಿಂದ ಬಿಜೆಪಿಯಿಂದಲ್ಲೇ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿದೆ. ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಮಂಡ್ಯದಲ್ಲಿನ ಅನ್ಯ ಪಕ್ಷದ ಪ್ರಭಾವಿ ನಾಯಕರಿಗೆ ಬಿಜೆಪಿ ನಾಯಕರು ಗಾಳ ಹಾಕುತ್ತಿದ್ದು, ಈಗಾಗಲೇ ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲವನ್ನ ಸೂಚಿಸಿದ್ದು, ಇತ್ತ ಮಾಜಿ ಸಂಸದ ಶಿವರಾಮೇಗೌಡ ಕೆಲ ದಿನಗಳಲ್ಲಿ ಬಿಜೆಪಿ ಸೇರುವುದಾಗಿ ಹೇಳಿದ್ದು, ಅನ್ಯ ಪಕ್ಷದಿಂದ ಬರುವವರಿಗೆ ಕೆಲವು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಮೂಲಕ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಕಮಲ ಅರಳಿಸಲು ಬಿಜೆಪಿ ನಾಯಕರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಸಚಿವ ನಾರಾಯಣ ಗೌಡ ಭೇಟಿ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ನಾರಾಯಣಗೌಡರ ಜೊತೆ ಮಾತನಾಡಿದ್ದೇನೆ. ಪೂರ್ಣಿಮಾ ಶ್ರೀನಿವಾಸ ಜೊತೆ ಸಹ ಮಾತನಾಡಿದ್ದೇನೆ, ಯಾರು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಈಗಿರುವ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಮತ್ತೆ ನಾನೇ ಮುಖ್ಯಮಂತ್ರಿ ಎಂಬ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಮಾತನಾಡಿ, ಇದರಲ್ಲಿ ತಪ್ಪೇನಿದೆ, ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿರುವುದರಲ್ಲಿ ತಪ್ಪಿಲ್ಲ. ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನ ನಾನು ಸ್ವಾಗತಿಸುತ್ತೇನೆ ಎಂದರು.

ಸಿದ್ದರಾಮಯ್ಯ ಕ್ಷೇತ್ರ ಗೊಂದಲ ಕುರಿತು ಮಾತನಾಡಿ, ಗೊಂದಲ ಆಗ್ತಿಲ್ಲ, ಕೇವಲ ಈ ತರ ಹೇಳಿಕೊಂಡು ಪ್ರಚಾರ ತಗೆದುಕೊಳ್ಳುತ್ತಿದ್ದಾರೆ. ಸುಮ್ಮನೆ ಜನರ ಮಧ್ಯೆ ನಾನು ಅಲ್ಲಿ ಇಲ್ಲಿ ನಿಲ್ತೀನಿ, ಎಲ್ಲಿ ಬೇಕಾದ್ರೂ ನಿಂತು ಗೆಲ್ತೀನಿ ಅಂತ ವಾತಾವರಣ ಸೃಷ್ಟಿ ಮಾಡಲು ಹೊರಟಿದಾರೆ. ಇದರಿಂದೇನು ಪ್ರಯೋಜನ ಅಂತ ನಮಗೇನೂ ಅರ್ಥ ಆಗಲ್ವಾ.? ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ ಸಿದ್ದರಾಮಯ್ಯ ಎಲ್ಲಿ ನಿಂತ್ಕೋಬೇಕು ಅಂತ ಕಾಂಗ್ರೆಸ್ ಪಕ್ಷ ನೋಡಿಕೊಳ್ಳುತ್ತದೆ ಎಂದು ಟಾಂಗ್ ನೀಡಿದರು.












Click it and Unblock the Notifications