ಕರ್ನಾಟಕ ಚುನಾವಣೆ ದಿನಾಂಕ ಘೋಷಣೆ; ಉಪೇಂದ್ರ ಟ್ವೀಟ್ ವೈರಲ್!
ಬೆಂಗಳೂರು, ಮಾರ್ಚ್ 29; ಬುಧವಾರ ಕರ್ನಾಟಕದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಚುನಾವಣಾ ದಿನಾಂಕವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಣೆ ಮಾಡಿದರು. ದಿನಾಂಕ ಘೋಷಣೆ ಮಾಡಿದ ಬಳಿಕ ಬಹುಭಾಷಾ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತು. ನೆಟ್ಟಿಗರು ಈ ಟ್ವೀಟ್‌ಗೆ ಕಮೆಂಟ್‌ಗಳನ್ನು ಹಾಕಿದರು. ಬೆಳಗ್ಗೆ ಮಾಡಿದ್ದ ಟ್ವೀಟ್ ಕುರಿತು ಸಂಜೆ ಅವರು ಮತ್ತೊಂದು ಟ್ವೀಟ್ ಮಾಡಿದರು.

ಚುನಾವಣಾ ದಿನಾಂಕ ಘೋಷಣೆ ಮಾಡಿದ ಬಳಿಕ 12.24ಕ್ಕೆ ಉಪೇಂದ್ರ ಟ್ವೀಟ್ ಮಾಡಿದರು. ಅದರಲ್ಲಿ, 'ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ?' ಎಂದು ಪ್ರಶ್ನೆ ಮಾಡಿದರು. ElectionCommission, Election2023, KarnatakaElection2023 ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದರು. ಈ ಟ್ವೀಟ್ ಕೆಲವೇ ಹೊತ್ತಿನಲ್ಲಿ ವೈರಲ್ ಆಯಿತು, 320 ರಿ ಟ್ವೀಟ್‌ಗಳಾಗಿವೆ, 3652 ಜನರು ಲೈಕ್ ಮಾಡಿದ್ದಾರೆ, 162.3ಕೆ ಜನರು ಈ ಟ್ವೀಟ್ ನೋಡಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಸಂಜೆ ಉಪೇಂದ್ರ ಮತ್ತೊಂದು ಟ್ವೀಟ್ ಮಾಡಿದ್ದಾರೆ. 'ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ...ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ ...ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂಬಾಲಕರು' ಎಂದು ಹೇಳಿದ್ದಾರೆ.

ಉಪೇಂದ್ರ ಮೊದಲ ಟ್ವೀಟ್‌ಗೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರು, '1ನೇ ತರಗತಿಯ ಪರೀಕ್ಷೆಗಳ ಫಲಿತಾಂಶವನ್ನೇ ಹೇಳೋದಿಕ್ಕೆ ಶಾಲೆಯವರು ಒಂದು ತಿಂಗಳು ತೆಗೆದುಕೊಳ್ಳುತ್ತಾರೆ ಅಂತದರಲ್ಲಿ ಮತ ಎಣಿಕೆಗೆ ಎರಡು ದಿನ ಆದರೂ ಬೇಡವೇ ಬುದ್ಧಿವಂತ ಉಪೇಂದ್ರ ಸರ್?' ಎಂದು @rajpurvii ಕಮೆಂಟ್ ಮಾಡಿದ್ದಾರೆ.
MeShankara ಎಂಬುವವರು ಕಮೆಂಟ್‌ನಲ್ಲಿ, 'ಉಪ್ಪಿ ಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜೊತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ?' ಎಂದು ಪ್ರಶಿಸಿದ್ದಾರೆ.
Prakash Hegde ಅವರು, 'ಹಾಯ್... ಬುದ್ಧಿವಂತರು ನೀವು... ಕರ್ನಾಟಕದ ಎಲ್ಲಕಡೆಯಿಂದ ಮತ ಪೆಟ್ಟಿಗೆಗಳನ್ನು ಒಂದೆಡೆ ಸುರಕ್ಷಿತವಾಗಿ ತರಿಸಿ.. ಎಣಿಕೆಗೆ ವ್ಯವಸ್ಥೆ ಮಾಡಬೇಕು ...ಎಲ್ಲಾದರೂ ಅಹಿತಕರ ಘಟನೆ ನಡೆದಲ್ಲಿ, ಮರು ಮತದಾನ ಮಾಡಬೇಕು, ಹಾಗಾಗಿ ಎರಡು ದಿನ ಬೇಕಾಗುತ್ತದೆ . ಹೀಗೆಲ್ಲ ಬಾಲಿಶ ಸ್ಟೇಟ್ಮೆಂಟ್ ಗಳು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ..ಅಲ್ವಾ' ಎಂದು ಉಪೇಂದ್ರರನ್ನು ಪ್ರಶ್ನಿದರು.
Prasanna Kumar ಕಮೆಂಟ್‌ನಲ್ಲಿ, 'ಅಯ್ಯ ಬುದ್ದಿವಂತ EVM ಯಂತ್ರ ಗಳನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಿ, ಯಾವುದೇ ಗೊಂದಲ ಇಲ್ಲದಂತೆ ಎಲ್ಲ ವ್ಯವಸ್ಥೆ, ದೂರದ ಊರುಗಳಿಂದ ಸಿಬ್ಬಂದಿ ಬರಲು, ಕಾಲವಕಾಶ ಬೇಕು,ಅಂದ ಹಾಗೆ ಎರಡೂವರೆ ಗಂಟೆ ಸಿನಿಮಾ ತೆಗೆಯಲು ತಿಂಗಳು ಗಟ್ಟಲೆ ತೆಗೆದು ಕೊಳ್ಳುವುದು ಯಾಕೆ?? ಮೊದಲು ಹೇಳಪ್ಪ ಬುದ್ದಿವಂತ' ಎಂದು ಸಿನಿಮಾ ಬಗ್ಗೆ ಪ್ರಸ್ತಾಪಿಸಿದ್ದಾರೆ.
Akshay hebbare ಕಮೆಂಟ್‌ನಲ್ಲಿ, 'ಉಪೇಂದ್ರರವರೆ ಒಂದು ಮೂವಿ ಮಾಡೋಕೆ ವರ್ಷಾನು ಗಟ್ಲೆ ಬೇಕೇ ನಿಮಗೆ...? ಬೆಳಗ್ಗೆ ಇಂದ ಸಂಜೆ ಒಳಗಡೆ ಮೂವಿ ready ಮಾಡಿ Next Day ನೇ ಥಿಯೇಟರ್ ಗೆ ಬಿಡಬಹುದು ಅಲ್ವಾ ಯಾಕೆ ಆಗಲ್ವ ಜವಾಬ್ದಾರರಿಯುತ ಸ್ಥಾನದಲ್ಲಿ ಇದಿರಾ ಜವಾಬ್ದಾರಿಯುತವಾಗಿ ಸ್ಟೇಟ್ಮೆಂಟ್ ಕೊಡಿ ಏನುಕ್ಕೆ ಅಂದ್ರೆ ನಿಮ್ ಮಾತಿಗೆ ಜನ ಗೌರವ ಕೊಡತಾರೆ ಅದನ್ನ ಹಾಳ್ ಮಾಡ್ಕೋಬೇಡಿ' ಎಂದು ಸಲಹೆ ನೀಡಿದ್ದಾರೆ.












Click it and Unblock the Notifications