Karnataka Election Slogan: ಕರ್ನಾಟಕ ಚುನಾವಣೆ 2023; ಘೋಷವಾಕ್ಯ ಬಿಡುಗಡೆ
ಬೆಂಗಳೂರು, ಏಪ್ರಿಲ್ 21; ಕರ್ನಾಟಕದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ವಿವಿಧ ಇಲಾಖೆಗಳ ಜೊತೆ ಸೇರಿ ಹಲವು ಕಾರ್ಯಕ್ರಮ ರೂಪಿಸಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಗೆ ಚುನಾವಣಾ ಘೋಷವಾಕ್ಯ ಬಿಡುಗಡೆ ಮಾಡಲಾಗಿದೆ. ಇದನ್ನು ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇನ್ನಿತರ ಕಛೇರಿಗಳ ಪತ್ರ ವ್ಯವಹಾರಗಳಲ್ಲಿ ಹಾಗೂ ಇಲಾಖೆಗಳ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸುವ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಸಿಆಸುಇ (ರಾಜಕೀಯ) ಮಹೇಶ್ ಆರ್. ಟಿಪ್ಪಣಿ ಹೊರಡಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಪದನಿಮಿತ್ತ ಸರ್ಕಾರದ ಕಾರ್ಯದರ್ಶಿಗಳು, ಸಿಆಸುಇ (ಚುನಾವಣೆಗಳು) ಇವರ ಪತ್ರವನ್ನು ಉಲ್ಲೇಖಿಸಿ ಈ ಟಿಪ್ಪಣಿ ಹೊರಡಿಸಲಾಗಿದೆ. ಪತ್ರದಲ್ಲಿ ತಿಳಿಸಿರುವಂತೆ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮತದಾರರಲ್ಲಿ ಮತದಾನ ಮತ್ತು ಚುನಾವಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಚುನಾವಣಾ ಘೋಷವಾಕ್ಯವನ್ನು ಬಿಡುಗಡೆ ಮಾಡಲಾಗಿದೆ.
'ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ' 'Nothing like Voting, I Vote for Sure' ಎಂಬುದು ಈ ಬಾರಿಯ ಚುನಾವಣೆಗೆ ಘೋಷವಾಕ್ಯವಾಗಿದೆ. ಮೇ 10ರಂದು ಈ ಬಾರಿಯ ಚುನಾವಣೆ ಮತದಾನ ನಡೆಯಲಿದ್ದು, ಅಲ್ಲಿಯ ತನಕ ಇದನ್ನು ಬಳಕೆ ಮಾಡಲಾಗುತ್ತದೆ.
ಈ ಘೋಷವಾಕ್ಯವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇನ್ನಿತರ ಕಛೇರಿಗಳ ಪತ್ರ ವ್ಯವಹಾರಗಳಲ್ಲಿ ಹಾಗೂ ಇಲಾಖೆಗಳ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತು ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.
ಮತದಾನ ಜಾಗೃತಿ ಕಾರ್ಯಕ್ರಮ; ಮೇ 10ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿರು ಬೇಸಿಗೆಯ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ನಡೆದ ಮತಗಟ್ಟೆಗಳ ಮಾಹಿತಿ ಸಂಗ್ರಹ ಮಾಡಿ ಮಾಡಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ.
ಬೈಕ್ ಜಾಥಾ, ಟಾಂಗಾ ಜಾಥಾ, ಎತ್ತಿನ ಗಾಡಿ ಜಾಥಾ, ಮ್ಯಾರಥಾನ್ ಮೂಲಕ ತಪ್ಪದೇ ಮೇ 10ರಂದು ಮತದಾನ ಮಾಡಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಜನರು ಕೆಲಸ ಮಾಡುವ ಸ್ಥಳಗಳಿಗೆ ತೆರಳಿ ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಮತದಾನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸಿನಿಮಾ ನಟರು, ಕ್ರಿಕೆಟಿಗರು ವಿಡಿಯೋ ಮೂಲಕ ಮತದಾನ ಮಾಡಿ ಎಂದು ಜನರಿಗೆ ಕರೆ ನೀಡುತ್ತಿದ್ದಾರೆ. ವಿವಿಧ ಇಲಾಖೆಗಳು ಈ ಕಾರ್ಯಕ್ಕೆ ಕೈ ಜೋಡಿಸಲಿದ್ದು, ಹಾಲಿನ ಪ್ಯಾಕೆಟ್, ಬಸ್ ಟಿಕೆಟ್‌ಗಳ ಮೇಲೆ ಚುನಾವಣಾ ಘೋಷವಾಕ್ಯವನ್ನು ಮುದ್ರಿಸಿ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಆದ್ದರಿಂದ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿಯೂ ಮತದಾನ ಮಾಡುವಂತೆ ಕರೆ ನೀಡುವ ಫೋಟೋ, ವಿಡಿಯೋ ಹಂಚುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.











Click it and Unblock the Notifications