ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ: ರೆಸಾರ್ಟ್ ಸಭೆಯ ಬಳಿಕ ಗುಟ್ಟು ಬಿಟ್ಟುಕೊಟ್ಟ ಡಿಕೆಶಿ- ಇವರಿಗೆ ಟಿಕೆಟ್ ಗ್ಯಾರಂಟಿ
ಬೆಂಗಳೂರಿನ ದೇವನಹಳ್ಳಿ ಸಮೀಪದ ರೆಸಾರ್ಟ್ ಒಂದರಲ್ಲಿ ಕಾಂಗ್ರೆಸ್ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗಿಯಾಗಿದ್ದರು. ಸಭೆಯ ಬಳಿಕ ಈ ಕೆಳಗಿನ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವುದ ಗ್ಯಾರಂಟಿ ಎಂದು ಡಿಕೆಶಿ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 02: ಕರ್ನಾಟಕ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ರೀತಿಯ ಕಸರತ್ತು ನಡೆಸುತ್ತಿವೆ. ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಬೇಕಿದೆ. ಇನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ದಗೊಳಿಸುವ ಹಂತದಲ್ಲಿದೆ. ಈ ಸಂಬಂಧ ಬೆಂಗಳೂರಿನ ದೇವನಹಳ್ಳಿ ಸಮೀಪದ ರೆಸಾರ್ಟ್ ಒಂದರಲ್ಲಿ ಕಾಂಗ್ರೆಸ್ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರೂ ಸೇರಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾಗಿಯಾಗಿದ್ದಾರೆ.

ಟ್ವೀಟ್ ಮಾಡಿದ ಡಿಕೆ ಶಿವಕುಮಾರ್
'ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಇಂದು AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ನಡೆಸಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ಸಭೆ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್
'ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿಕೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆ ನಡೆಸಲಾಯಿತು' ಎಂದು ಕಾಂಗ್ರೆಸ್ ತಿಳಿಸಿದೆ.

ಸಭೆಯಲ್ಲಿ ಭಾಗಿಯಾದ ಪ್ರಮುಖರು
ಪಕ್ಷದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ಕೇಂದ್ರದ ಮಾಜಿ ಸಚಿವರಾದ ಕೆಎಚ್ ಮುನಿಯಪ್ಪ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಭಾಗವಹಿಸಿದ್ದರು ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

ಟಿಕೆಟ್ ಬಗ್ಗೆ ಡಿಕೆಶಿ ಹೇಳಿದ್ದೇನು?
ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ನ ಪಕ್ಷದ ಎಲ್ಲ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಸಹಕಾರ ನೀಡದಿದ್ದರೂ ನಮ್ಮ ಶಾಸಕರು ಜನರ ನಡುವೆ ನಿಂತು ದುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜತೆ ಚರ್ಚೆ
ರಾಜ್ಯದ ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜತೆ ಚರ್ಚೆ ಮಾಡಿ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಲು ಪಕ್ಷದ ಕಾರ್ಯದರ್ಶಿಗಳು, ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿತ್ತು. ಇಂದು ಅವರು ತಮ್ಮ ಶಿಫಾರಸ್ಸುಗಳನ್ನು ನಮಗೆ ನೀಡಲಿದ್ದಾರೆ. ರಾಜ್ಯದಲ್ಲಿ ದೆಹಲಿ ನಾಯಕರು ಪ್ರತ್ಯೇಕ ಸಮೀಕ್ಷೆ ನಡೆಸಿದ್ದಾರೆ. ನಾವೂ ಕೂಡ ಸಮೀಕ್ಷೆ ಮಾಡಿಸಿದ್ದೇವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನಿಂಗ್ ಕಮಿಟಿ ತೀರ್ಮಾನ ತೆಗೆದುಕೊಳ್ಳಲಿದೆ' ಎಂದು ಡಿಕೆಶಿ ಹೇಳಿದ್ದಾರೆ.

ಅಭ್ಯರ್ಥಿ ಆಯ್ಕೆ ಸವಾಲಾಗಿಲ್ಲ
ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಮಗೆ ಅಭ್ಯರ್ಥಿ ಆಯ್ಕೆ ಸವಾಲಾಗಿ ಪರಿಣಮಿಸಿಲ್ಲ. ರಾಜ್ಯದಲ್ಲಿ ಗೆದ್ದು ಅಧಿಕಾರ ಹಿಡಿಯುವುದು ನಮ್ಮ ಗುರಿ. ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಕುರಿತು ಮತದಾರರು ವಿಶ್ವಾಸ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಿಂದ 10, 12, 20 ಅರ್ಜಿಗಳು ಬಂದಿವೆ. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕೆಲವರು ತ್ಯಾಗ ಮಾಡಲೇಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ, ಬೇರೆ ರೀತಿಯಲ್ಲಿ ಅವರಿಗೆ ಅಧಿಕಾರ ನೀಡಲಾಗುವುದು. ಹೀಗಾಗಿ ಪಕ್ಷದ ಟಿಕೆಟ್‌ಗೆ ಆಸೆ ಪಟ್ಟು ಅರ್ಜಿ ಹಾಕಿರುವುದರಲ್ಲಿ ತಪ್ಪಿಲ್ಲ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನೀವೆಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು ಎಂದು ಡಿಕೆಶಿ ಕೇಳಿಕೊಂಡಿದ್ದಾರೆ.












Click it and Unblock the Notifications