
ಬೆಂಗಳೂರು, ಡಿಸೆಂಬರ್ 22 : 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂಬುದು ಖಚಿತವಾಗುತ್ತಿದೆ. ಮೂರು ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಹಲವಾರು ವಿಚಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ವಿಚಾರ ಪ್ರಮುಖ ಚುನಾವಣಾ ಅಸ್ತ್ರವಾಗಲಿದೆ. ಸ್ಥಳೀಯ ವಿಚಾರಗಳು ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
2018ರ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ, ಹೇಗೆ?
ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ), ಹಿಂದುತ್ವ ವಿಚಾರವೂ ಚುನಾವಣಣೆಯ ಪ್ರಮುಖ ವಿಷಯವಾಗಲಿದೆ. ರಾಜಕೀಯ ತಜ್ಞರ ಪ್ರಕಾರ ಈ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯಲಿದೆ.
ಗ್ರಾಮೀಣ, ನಗರ ಕ್ಷೇತ್ರಗಳಲ್ಲಿ ಸಮಬಲ ಸಾಧಿಸಿದವರೇ ಕರ್ನಾಟಕದಲ್ಲಿ ಬಾಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಪರವಾಗಿದ್ದಾರೆ ಎಂಬುದು ಅವರ ಅನೇಕ ನಿರ್ಧಾರಗಳ ಮೂಲಕ ಬಹಿರಂಗವಾಗಿದೆ. ಹಲವಾರು ಬಾರಿ ಅವರು ಇದೇ ವಿಚಾರ ಮುಂದಿಟ್ಟುಕೊಂಡು ಆರ್‌ಎಸ್‌ಎಸ್ ಮತ್ತು ಭಜರಂಗದಳದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಅಹಿಂದ ವಾದ ಮುಂದಿಟ್ಟರೆ ಯುವಕರು ಬಲ ಪಂಥೀಯ ತತ್ವದತ್ತ ಆಕರ್ಷಿತರಾಗವುದನ್ನು ತಪ್ಪಿಸಬಹುದು ಎಂಬುದನ್ನು ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಜಾತಿವಾರು ಸಮೀಕ್ಷೆಯೂ ಅವರ ಕೈಯಲ್ಲಿರುವ ಅಸ್ತ್ರವಾಗಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಸಿದ ಜಾತಿವಾರು ಸಮೀಕ್ಷೆಯ ವರದಿಯನ್ನು ಇನ್ನೂ ಬಹಿರಂಗ ಮಾಡಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ 9.8, 8.2ರಷ್ಟು ಜನಸಂಖ್ಯೆ ಹೊಂದಿದೆ ಎಂಬುದು ಸದ್ಯದ ವರದಿ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಅಹಿಂದಕ್ಕೆ ತಿರುಗೇಟು ನೀಡಲು ಹಿಂದುತ್ವ ವಿಚಾರವನ್ನು ಬಳಸಿಕೊಳ್ಳಲಿದೆ. ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಸೇರಿಸಿಕೊಂಡು ಈ ಕುರಿತು ಸ್ಪಷ್ಟ ಸಂದೇಶ ರವಾನೆ ಮಾಡಲಾಗಿದೆ.
ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ಬಿಜೆಪಿ ಪ್ರಚಾರ ನಡೆಸಲಿದೆ. ಗುರುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರ ಬಂದರೆ ಟಿಪ್ಪು ಜಯಂತಿ ಇರುವುದಿಲ್ಲ ಎಂದು ಘೋಷಿಸಿದ್ದಾರೆ.
ಹನುಮ ಜಯಂತಿ ವಿಚಾರದಲ್ಲಿ ಬಿಜೆಪಿ ರಾಜ್ಯದಲ್ಲಿ ಈಗಾಗಲೇ ಗದ್ದಲ ಎಬ್ಬಿಸಿದೆ. ಸಿದ್ದರಾಮಯ್ಯ ಅವರ ಅಹಿಂದ ಸಿದ್ಧಾಂತಕ್ಕೆ ತಿರುಗೇಟು ನೀಡಲು ಹಿಂದುತ್ವವೇ ಪ್ರಬಲ ಅಸ್ತ್ರ ಎಂದು ಬಿಜೆಪಿಯೂ ತಿಳಿದಿದೆ.
ಕೆಲವು ತಿಂಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು. ಇದು ಸಹ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪಕ್ಷ ಮಾಡಿದ ಒಂದು ಪ್ರಯತ್ನ. ಒಕ್ಕಲಿಗ ಸಮುದಾಯ ಜೆಡಿಎಸ್ ಪರವಾದ ನಿಲುವನ್ನು ಹೊಂದಿದೆ ಇದನ್ನು ಪರವರ್ತಿಸಲು ಮಠಕ್ಕೆ ಭೇಟಿ ನೀಡಲಾಯಿತು.
ಕಾಂಗ್ರೆಸ್ ಕನ್ನಡವನ್ನು ಪ್ರಮುಖ ವಿಷಯವಾಗಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ವಿಷಯವನ್ನು ಪಕ್ಷ ಮುಂಚೂಣಿಗೆ ತಂದಿದೆ. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ, ಶಾಲೆಗಳಲ್ಲಿ ಕನ್ನಡ ಕಡ್ಡಾಯ ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಯುವಂತೆ ನೋಡಿಕೊಳ್ಳುತ್ತಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!