ಸಿದ್ದರಾಮಯ್ಯ, ಡಿಕೆಶಿ ಟಾರ್ಗೆಟ್ ಮಾಡಿದ ಬಿಜೆಪಿ ಗೆಲ್ಲಲು ಸಾಧ್ಯವೇ?
ಮೈಸೂರು, ಏಪ್ರಿಲ್ 12: ಕರ್ನಾಟಕ ವಿಧಾನಸಭಾ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಭಾರತೀಯ ಜನತಾ ಪಕ್ಷವು(ಬಿಜೆಪಿ) ತನ್ನ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರಮುಖ ಎದುರಾಳಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮಣಿಸಲು ಪಣ ತೊಟ್ಟಿದೆ.
ವಿಧಾನಸಭಾ ಚುನಾವಣೆ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಸಿದೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಹಾಗೂ ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸುವುದು ಸಾಧ್ಯವಿಲ್ಲವಾಗಿದೆ.

ಇದು ಗೊತ್ತಿದ್ದೆ ಸೋಮಣ್ಣ ಅವರಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೂ ಟಿಕೆಟ್ ನೀಡಲಾಗಿದೆ. ಅವರಿ ಎರಡು ಕಡೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ದ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಅಶೋಕ್ ಅವರ ಸ್ವತಂ ಕ್ಷೇತ್ರವಾದ ಪದ್ಮನಾಭನಗರದಿಂದಲೂ ಟಿಕೆಟ್ ನೀಡಲಾಗಿದೆ.
ಇಲ್ಲಿ ಗಮನಿಸಬೇಕಾದ್ದು ಅಶೋಕ್ ಒಂದು ಕಡೆಯಾದರೂ ಗೆಲ್ಲುವ ಅವಕಾಶ ನೀಡಿರುವ ಬಿಜೆಪಿಯು ವಸತಿ ಸಚಿವ ಸೋಮಣ್ಣ ಅವರಿಗೆ ವರುಣಾ ಹಾಗೂ ಚಾಮರಾಜನಗರ ಎರಡು ಕಡೆ ನೀಡಿ ಒಂದೂ ಕಡೆ ಗೆಲ್ಲದಂತೆ ಮಾಡಲಾಗಿದೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ಯಪಡಿಸುತ್ತಿದ್ದಾರೆ. ಕಾರಣ ಹಿಂದೆ ಸೋಮಣ್ಣ ಅವರು ಚಾಮರಾಜನಗರದಲ್ಲಿ ಕಣಕ್ಕಿಳಿಯುವ ಸುದ್ದಿ ಬಂದಾಗ ಸ್ವತಃ ಬಿಜೆಪಿ ಕಾರ್ಯಕರ್ತರೇ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದರು.
ಚುನಾವಣಾ ಕಣ ರಂಗೇರಿದಾಗ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ದ ಮೊದಲು ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಲಾಗಿತ್ತು, ಖುದ್ದು ಯಡಿಯೂರಪ್ಪ ಅವರೇ ವಿಜಯೇಂದ್ರ ಅವರನ್ನು ನಿಲ್ಲಿಸಲು ಮಾತುಕತೆ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ವರುಣಾದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಗೆಲುವು ಕಷ್ಟ ಎಂದರಿತು ವಿಜಯೇಂದ್ರ ನಿಲ್ಲಿಸಲು ಹಿಂದೇಟು ಹಾಕಲಾಯಿತು.

ಕೊನೆಗೆ ವಿ ಸೋಮಣ್ಣ ಅವರನ್ನು ವಿಧಾನಸಭಾ ಚುನಾವಣೆಗೆ ಎರಡು ಕಡೆ ನಿಲ್ಲಿಸಲಾಗುತ್ತದೆ ಎಂದು ಹೇಳಲಾಯಿತು, ಕೊನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರ ವರಿಷ್ಠರ ಸೂಚನೆಯಂತೆ ಸೋಮಣ್ಣ ಅವರನ್ನು ವರುಣಾದಲ್ಲಿ ಕಣಕ್ಕೆ ಇಳಿಸಲು ನಿರ್ಧರಿಸಲಾಯಿತು. ಇಲ್ಲಿ ಸೋಮಣ್ಣ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ಕಾರಣ ಈಗ ಟಿಕೆಟ್ ನೀಡಿರುವ ವರುಣಾ ಹಾಗೂ ಚಾಮರಾಜನಗರ ಎರಡು ಕಡೆ ಸೋಮಣ್ಣ ಗೆಲ್ಲುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಈ ಎರಡು ಕ್ಷೇತ್ರಗಲ್ಲಿ ಲಿಂಗಾಯತ ಸಮುದಾಯದ ಮತಗಳೇ ಅಧಿಕವಿದೆ. ಆದರೆ ಈ ಎರಡು ಕ್ಷೇತ್ರಗಳು ಮೊದಲಿನಿಂದಲೂ ಕಾಂಗ್ರೇಸ್‌ನ ಭದ್ರಕೋಟೆಗಳಾಗಿವೆ. ಹೀಗಾಗಿ ಸೋಮಣ್ಣ ಅವರನ್ನು ಬಲಿ ಕೊಡಲಾಗುತ್ತಿದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ಯಪಡಿಸಿದ್ದಾರೆ. ಆದರೆ ಕಂದಾಯ ಸಚಿವ ಆರ್ ಅಶೋಕ್‌ಗೆ ಸೇಫರ್ ಸೈಡ್ ಎಂಬಂತೆ ಪದ್ಮನಾಭನಗರದಿಂದ ಟಿಕೆಟ್ ನೀಡಲಾಗಿದೆ. ಸಚಿವ ವಿ ಸೋಮಣ್ಣ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಸಂಬಂಧ ಹಾಳುಮಾಡಿಕೊಂಡ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ವಿ ಸೋಮಣ್ಣ ಅವರು ತಮ್ಮ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಸೋಮಣ್ಣ ಸೇರಿದಂತೆ ತಮಗೂ ಸೇರಿ ತಮ್ಮ ಮಕ್ಕಳಿಗೂ ಟಿಕೆಟ್ ಕೋರಿಕೆ ಇಟ್ಟಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ನಿಮ್ಮ ಮಕ್ಕಳಿಗೆ ಟಿಕೆಟ್ ನೀಡಬೇಕಾದರೆ ನಿಮ್ಮ ಟಿಕೆಟ್ ಬಯಕೆ ಮರೆತು ಬಿಡಿ ಎಂದು ಖಡಕ್ ಸೂಚನೆ ನೀಡಲಾಗಿತ್ತು ಅದರಂತೆ ಈಗ ಜಾರಿಯಾಗುತ್ತಿದೆ.
ಬಿಜೆಪಿ ಟಿಕೆಟ್ ತಡವಾಗಿ ಘೋಷಣೆ ಮಾಡಿರುವುದು ವರುಣಾದಲ್ಲಿ ಸೋಮಣ್ಣ ಅವರು ಕ್ಷೇತ್ರ ಪ್ರಚಾರ ಮಾಡಲು ಇನ್ನಷ್ಟೇ ತೊಡಗಬೇಕಿದೆ. ಆದರೆ ಈಗಾಗಲೇ ಸಿದ್ದರಾಮಯ್ಯ ಅವರು ಮಗ ಯತೀಂದ್ರ ಹಾಗೂ ಕಾಂಗ್ರೆಸ್ಸಿಗರು ಒಂದು ಸುತ್ತು ಎಲ್ಲ ಹಳ್ಳಿಗಳನ್ನು ಬಳಸಿದ್ದಾರೆ. ಈಗ ಸೋಮಣ್ಣ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಕ್ಷೇತ್ರ ಪ್ರಚಾರ ಮಾಡಿ ಎರಡೂ ಕಡೆ (ಚಾಮರಾಜನಗರ, ವರುಣಾ) ಗೆಲ್ಲುವುದು ಅಸಾಧ್ಯದ ಸಂಗತಿ ಎಂದು ಹಲವರು ಅಭಿಮತ ನೀಡುತ್ತಿದ್ದಾರೆ.
ಇನ್ನೂ ಕನಕಪುರದಲ್ಲಿ ಆರ್ ಅಶೋಕ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಕನಕಪುರ ಯಾವತ್ತು ಕನಕಪುರದ ಬಂಡೆ ಎಂದು ಕರೆಸಿಕೊಂಡ ಡಿಕೆ ಶಿವಕುಮಾರ್ ಅವರ ಕರ್ಮಭೂಮಿ. ಅಲ್ಲಿ ಕಾಂಗ್ರೆಸ್ಸಿಗರದೇ ಪ್ರಾಬಲ್ಯ. ಹೀಗಾಗಿ ಅಲ್ಲಿ ಅಶೋಕ್ ಗೆಲ್ಲುವುದೇ ಕನಸಿನ ಮಾತು ಎಂದು ರಾಜಕೀಯ ಸಮೀಕ್ಷೆಗಳು ಹೇಳುತ್ತವೆ.












Click it and Unblock the Notifications