ಡಿಕೆ ರವಿ ಸಾವು : ಕಲಾಪದಲ್ಲಿ ಏನಾಯ್ತು?
ಬೆಂಗಳೂರು, ಮಾ. 18 : ದೊಡ್ಡಕೊಪ್ಪಲು ಕರಿಯಪ್ಪ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬುಧವಾರದ ಕಲಾಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ಮಂಗಳವಾರ ಸಂಜೆಯಿಂದಲೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಬುಧವಾರದ ಕಲಾಪ ಆರಂಭವಾಗುತ್ತಿದ್ದಂತೆ ಡಿಕೆ ರವಿ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡದಿದ್ದಾಗ ಧರಣಿ ಆರಂಭಿಸಿದರು. [ಈ ಸಾವು ನ್ಯಾಯವೇ ಮತ ಹಾಕಿ]

ರಾಜ್ಯ ಸರ್ಕಾರ ಮೊಂಡುತನದಿಂದ ಸದನದ ಕಲಾಪವನ್ನು ಹಾಳು ಮಾಡುತ್ತಿದೆ. ಬಜೆಟ್ ಮತ್ತು ವಿವಿಧ ಮಸೂದೆಗಳ ಮೇಲೆ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ನಾಳೆಯಿಂದಲೇ ಚರ್ಚೆ ಆರಂಭವಾಗಲಿದೆ ಎಂದರು. [ಡಿಕೆ ರವಿ ಪ್ರಕರಣ: ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ]
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಲಾಯಿತು. ಆಗಲೂ ಧರಣಿ ಮುಂದುವರೆದಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ಆಹೋರಾತ್ರಿ ಧರಣಿಯನ್ನು ಇಂದು ಸಹ ಮುಂದುವರೆಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅತ್ತ ವಿಧಾನಪರಿಷತ್ತಿನಲ್ಲಿಯೂ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಷಯ ಪ್ರಸ್ತಾಪ ಮಾಡಿದ್ದು, ಸಿಬಿಐ ತನಿಖೆಗಾಗಿ ಪಟ್ಟು ಹಿಡಿದಿದ್ದಾರೆ.[ರವಿ ಮಾವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?]
ಸಿದ್ದರಾಮಯ್ಯ ಹೇಳುವುದೇನು : ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಸಿಐಡಿಗೆ ವಹಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಈ ಬಗ್ಗೆ ಧರಣಿ ನಡೆಸುವ ಅಗತ್ಯವಿಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು. [ಬಿಜೆಪಿ, ಜೆಡಿಎಸ್ ಧರಣಿಯ ಚಿತ್ರಗಳು]












Click it and Unblock the Notifications