Karnatak Elections: ನಾಮಪತ್ರ ಸಲ್ಲಿಕೆ ವೇಳೆ 'ದಣಿವರಿಯದ ನಾಯಕ ಡಿಕೆಶಿ' ಸಾಂಗ್ ರಿಲೀಸ್- ವೈರಲ್ ಆಯ್ತು 'ನಿಷ್ಠೆಯೋಗಿ' ಹಾಡು
ಕನಕಪುರ, ಏಪ್ರಿಲ್ 17: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Elections 2023 ) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಅವರು ನಾಮಪತ್ರ ಸಲ್ಲಿಸಿದ್ದಾರೆ. ಕನಪುರದಲ್ಲಿ ( Kanakapura ) ನಡೆದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಡಿಕೆಶಿ ಅಭಿಮಾನಗಳ ದಂಡೇ ನೆರೆದಿತ್ತು. ಇದೇ ವೇಳೆ, 'ನಿಷ್ಠಯೋಗಿ' ಎನ್ನುವ ಶೀರ್ಷಿಕೆಯ ಹಾಡನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
'ದಣಿವರಿಯದ ನಾಯಕ, ರಕ್ಷಣೆಯ ಕಾಯಕ' ಎಂದು ಶುರುವಾಗುವ ಈ ಹಾಡನ್ನು ಶಿವಕುಮಾರ್ ಅವರ ಅಭಿಮಾನಿಗಳು ರಿಲೀಸ್ ಮಾಡಿದ್ದು, ಈ ಹಾಡಿನಲ್ಲಿ ಡಿಕೆಶಿಯ ವ್ಯಕ್ತಿತ್ವವನ್ನು ಹೊಗಳಲಾಗಿದೆ. ಅಲ್ಲದೇ ಸಾರ್ವಜನಿಕ ಸೇವೆಯಲ್ಲಿ ಅವರ ಸಮರ್ಪಣೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಅವರ ನಿಲವುಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಈ ಹಾಡು ಡಿ.ಕೆ.ಶಿವಕುಮಾರ್ ಅವರ ವರ್ಚಸ್ವಿ ನಾಯಕತ್ವ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಅವರ ಅವಿರತ ಪ್ರಯತ್ನಗಳ ಬಗ್ಗೆ ಅವರ ಅಭಿಮಾನಿಗಳು ಹೊಂದಿರುವ ಅಭಿಮಾನ ಮತ್ತು ಗೌರವವನ್ನು ತೋರಿಸುತ್ತದೆ. ಹಾಡಿನ ಸಾಹಿತ್ಯವು ಶಿವಕುಮಾರ್ ಅವರ ರಾಜ್ಯದ ಜನರಿಗಾಗಿರುವ ಬದ್ಧತೆ ಮತ್ತು ಜನರ ಹಕ್ಕುಗಳಿಗಾಗಿ ಹೋರಾಡುವ ಅವರ ಅದಮ್ಯ ಮನೋಭಾವಕ್ಕಾಗಿ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಈ ಹಾಡನ್ನು ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ನಿಷ್ಠಯೋಗಿ' ಹಾಡು ವೈರಲ್ ಆಗುತ್ತಿದೆ.
ಕನಪುರದಲ್ಲಿ ಡಿಕೆಶಿ ನಾಮಪತ್ರ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇಂದು ನಾಮ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಜನಸಾಗರವೇ ಹರಿದು ಬಂದಿದೆ. ಕನಪುರದಲ್ಲಿ ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಸಿದ್ದ ಕೆಂಕೇರಮ್ಮ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರೆಲ್ಲರೂ ನಾಮಪತ್ರ ಸಲ್ಲಿಸಲು ಕಚೇರಿಗೆ ತೆರಳಿರು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಡಿಕೆಶಿ ಪರ ಘೋಷಣೆಯನ್ನು ಕೂಗಿದೆ.
ಜಗದೀಶ್ ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ಅವರು ಶೆಟ್ಟರ್ ಅವರನ್ನು ಬರಮಾಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಶೆಟ್ಟರ್ ಅವರನ್ನು ಹಾಡಿ ಹೊಗಳಿದರು.

ಶೆಟ್ಟರ್ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ ಮತ್ತು ಉಳಿದವರೂ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಒತ್ತಾಯಿಸಿದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುತ್ತಿರುವುದು ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯನ್ನು ಸೂಚಿಸುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಶೆಟ್ಟರ್ ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರು ಯಾವಾಗಲೂ ಜಾತ್ಯತೀತ ಹೃದಯ ಹೊಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಹಿರಿಯ ರಾಜಕಾರಣಿಯಾದ ಅವರನ್ನು ಕಾಂಗ್ರೆಸ್ ಪಕ್ಷವು ಅವರಿಗೆ ಅರ್ಹವಾದ ಗೌರವದೊಂದಿಗೆ ನಡೆಸಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.












Click it and Unblock the Notifications