ಕನ್ನಡಿಗರಿಗಾಗಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ: ಕರವೇ ನಾರಾಯಣಗೌಡ ಸಿಹಿಸುದ್ದಿ
ಕನ್ನಡಪರ ಹೋರಾಟಗಳಿಂದ ಮನೆಮಾತಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿಎ ನಾರಾಯಣಗೌಡ ಅವರು ಕನ್ನಡಿಗರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕಕ್ಕೆ ತೊಂದರೆಯಾದಾಗ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಿದ್ದ ನಾರಾಯಣಗೌಡ, ಇದೀಗ ರಾಜಕೀಯ ಪ್ರವೇಶಿಸಲು ಹೊರಟಿದ್ದಾರೆ. ಬಹುದಿನಗಳಿಂದ ಒಂದು ಪಕ್ಷ ಕಟ್ಟಿ ಬೇಡಿಕೆ ಇವರ ಮುಂದಿತ್ತು. ಈ ಬಗ್ಗೆ ಕೊನೆಗೂ ಅವರು ನಿರ್ಧಾರ ಪ್ರಕಟಿಸಿದ್ದಾರೆ. ಕನ್ನಡಿಗರ ರಕ್ಷಣೆಗೆ ಹೊಸ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಎಂದು ಘೋಷಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು ನಾನು ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ 1999ರಲ್ಲೇ ಕನ್ನಡ ನಾಡು ಮುನ್ನಡೆ ಪಕ್ಷ ಎಂಬ ಪಕ್ಷ ಸ್ಥಾಪಿಸಿದ್ದೆ. ಆದರೆ, ಅವತ್ತು ಇಂತಹ ಸಂಘಟನೆಗಳ ಕೆಲವರ ವ್ಯಕ್ತಿ ಪ್ರತಿಷ್ಠೆ, ನಾಯಕರ ಸ್ವಾರ್ಥದಿಂದ ಆ ಪಕ್ಷ ಬೆಳೆಯಲಿಲ್ಲ. ಹೀಗಾಗಿ ನಾನು ಕೂಡ ಎದೆಗುಂದಲಿಲ್ಲ. ಈಗ ಮತ್ತೊಮ್ಮೆ ನಾನು ಅಂತಹ ಪ್ರಯತ್ನ ಮಾಡಲು ಸಜ್ಜಾಗುತ್ತಿದ್ದೇನೆ ಎಂದು ನಾರಾಯಣಗೌಡ ಹೇಳಿದ್ದಾರೆ. ಕರ್ನಾಟಕದಲ್ಲಿ ಶೀಘ್ರವೇ ಮಹಾಸಂಘರ್ಷ ಯಾತ್ರೆ ಮಾಡಿ ಇಡೀ ಎಲ್ಲ ಜಿಲ್ಲೆಗಳಲ್ಲಿ ಕನ್ನಡಿಗರನ್ನ ಒಗ್ಗೂಡಿಸುವೆ. ಸ್ವಾಮೀಜಿಗಳು, ರೈತರು, ದಲಿತರು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಸರಣಿ ಸಭೆ ನಡೆಸುತ್ತೇನೆ. ಬಳಿಕ ಬೆಂಗಳೂರಿನಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದೆ ನಮ್ಮ ಹೊಸ ಪ್ರಾದೇಶಿಕ ಪಕ್ಷ ಹುಟ್ಟಿಕೊಳ್ಳಲಿದೆ. ಇದು ಮುಂದಿನ ಮೂರು ವರ್ಷದೊಳಗೆ ಆಗಲಿದೆ ಎಂದು ಹೇಳಿದ್ದಾರೆ.

ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕಿಗಾಗಿ ಇಲ್ಲಿಗೆ ಬರುವ ಪರಭಾಷಿಕರನ್ನು ಓಲೈಸುತ್ತಾರೆ. ಯಾವ ರಾಜ್ಯದಲ್ಲೂ ಸಾಧ್ಯವಿಲ್ಲದ ಸವಲತ್ತುಗಳನ್ನು ಬೇಗನೆ ಅವರಿಗೆ ಕೊಡುತ್ತಾರೆ. ಒಂದು ರೇಷನ್ ಕಾರ್ಡ್‌ನಿಂದ ಹಿಡಿದು ಮತದಾನ ಮಾಡುವವರೆಗೆ ಅವರಿಗೆ ಎಲ್ಲವೂ ಬೇಗ ಸಿಗುತ್ತೆ. ರಾಜ್ಯದಲ್ಲಿ ಉತ್ತರ ಭಾರತೀಯರು ಮತ್ತು ಉದ್ಯಮಕ್ಕಾಗಿ ಬಂದಿರುವ ಬೇರೆ ಬೇರೆ ರಾಜ್ಯಗಳ ಜನರು ಇಲ್ಲಿ ಹೆಚ್ಚಿನ ಭೂಮಿ ಖರೀದಿಸಿದ್ದಾರೆ. ಉತ್ತರ ಭಾರತೀಯರು ಬೆಂಗಳೂರನ್ನು ಕೇಂದ್ರ ಆಡಳಿತ ಪ್ರದೇಶ ಮಾಡಬೇಕೆಂದು ರಾಷ್ಟ್ರಪತಿವರೆಗೆ ಹೋಗುತ್ತಿದ್ದಾರೆ. ರಾಜಕಾರಣಿಗಳ ಬೆಡ್‌ರೂಂಗೆ ಹೋಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿ ಬಳಿಕ ಆಂಧ್ರದ ರೆಡ್ಡಿಗಳು ಈ ಸಾಲಿನಲ್ಲಿದ್ದಾರೆ. ಈ ಪರಿಸ್ಥಿತಿಗೆ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರು ಕಾರಣ ಎಂದು ದೂರಿದ್ದಾರೆ.

ಈ ಹಿಂದೆ ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಗುಡುಗಿದ್ದ ನಾರಾಯಣಗೌಡ, ಈ ವಿಚಾರದಲ್ಲಿ ರಾಜಕೀಯ ನಾಯಕರು ಹಾಗೂ ಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಬೇಸರದಿಂದ ಅವರು ರಾಜಕೀಯದತ್ತ ಮುಖ ಮಾಡುವ ನಿರ್ಧಾರದ ಸುಳಿವು ನೀಡಿದ್ದರು. ನಾನು ಯಾವ ಅಧಿಕಾರ ಸ್ಥಾನದಲ್ಲೂ ಇಲ್ಲ. ನ್ಯಾಯಕ್ಕಾಗಿ ಈ ಮಕ್ಕಳೊಂದಿಗೆ ಸೇರಿ ಬಡಿದಾಡಬಹುದು ಅಷ್ಟೇ ಎಂದಿದ್ದಕ್ಕೆ ಹಲವರು ಗೌಡ್ರೇ ನೀವೇ ಯಾಕೆ ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸಬಾರದು? ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಪಕ್ಷ ಸ್ಥಾಪಿಸುವುದು, ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭದ ವಿಷಯವಲ್ಲ. ಅದಕ್ಕೆ ಕಾಲವೂ ಸರಿಯಾಗಿಲ್ಲ, ಕನ್ನಡ ಜನತೆಗೆ ಕನ್ನಡ ಕೇಂದ್ರಿತ ರಾಜಕೀಯ ಪಕ್ಷವೊಂದರ ಅಗತ್ಯವಿದೆ ಎಂಬ ಮನವರಿಕೆ ಆಗಬೇಕು. ಆಗ ಮಾತ್ರ ಇದು ಸಾಧ್ಯ ಎಂದಿದ್ದರು.












Click it and Unblock the Notifications