'ಹೆಬ್ಬುಲಿ' ಹೇರ್ ಕಟ್ಟಿಂಗ್ ಬೇಡ; ಹೆಡ್ ಮಾಸ್ಟರ್ ಬರೆದ ಪತ್ರ ವೈರಲ್
ಬಾಗಲಕೋಟೆ, ಜುಲೈ 23; ಸಿನಿಮಾ ನಟರು ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತಾರೆ ಎಂಬುದು ಗುಟ್ಟಾಗಿ ಏನೂ ಉಳಿದಿಲ್ಲ. ಅದರಲ್ಲೂ ಅವರ ಥರ ಬಾಡಿ ಬಿಲ್ಡ್ ಮಾಡುವುದು, ಸಿಗರೇಟು ಸೇದುವುದು, ಹೇರ್ ಸ್ಟೈಲ್ ಮಾಡಿಸುವುದು ನಡೆಯುತ್ತಲೇ ಇರುತ್ತದೆ. ಈಗ ಇದೇ ಮಾದರಿ ಹೇರ್ ಸ್ಟೈಲ್ ಒಂದು ಚರ್ಚೆಗೆ ಕಾರಣವಾಗಿದೆ.
ನಟ ಕಿಚ್ಚ ಸುದೀಪ್ 'ಹೆಬ್ಬುಲಿ' ಚಿತ್ರದಲ್ಲಿ ಮಾಡಿಕೊಂಡ ಹೇರ್ ಸ್ಟೈಲ್ ವಿದ್ಯಾರ್ಥಿಗಳನ್ನು ಸೆಳೆದಿದೆ. ಆದರೆ ಇದು ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಾದರಿ ಹೇರ್ ಕಟ್ಟಿಂಗ್ ಮಾಡಬೇಡಿ ಎಂದು ಶಾಲೆಯ ಮುಖ್ಯೋಪಾಧ್ಯಯರು ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಚ್ಚರಿಯಾದರೂ ಇದು ಸತ್ಯ. ಸರ್ಕಾರಿ ಪ್ರೌಢ ಶಾಲೆ ಕುಲಹಳ್ಳಿಯ ಮುಖ್ಯ ಶಿಕ್ಷಕರು 20/7/2023ರಂದು ಕುಲಹಳ್ಳಿಯ ಹೇರ್ ಕಟಿಂಗ್ ಅಂಗಡಿ ಮಾಲೀಕ ಚನ್ನಪ್ಪ ಸಿದರಾಮಪ್ಪ ನಾವಿ ಎಂಬುವವರಿಗೆ ಬರೆದಿರುವ ಪತ್ರ ಈಗ ಎಲ್ಲೆಡೆ ಹರಿದಾಡುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ 'ಹೆಬ್ಬುಲಿ' ಸ್ಟೈಲ್ ಕಟಿಂಗ್ ಮಾಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಬಾಗಲಕೋಟೆಯ ಶಾಲೆ; ಸರ್ಕಾರಿ ಪ್ರೌಢ ಶಾಲೆ, ಕುಲಹಳ್ಳಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿದೆ. ಈ ಶಾಲೆಯ ಮುಖ್ಯ ಶಿಕ್ಷಕರಾದ ಶಿವಾಜಿ ನಾಯಕ ಬರೆದಿರುವ ಪತ್ರವಿದು. ಈ ಪತ್ರ ಸರ್ಕಾರಿ ಪ್ರೌಢ ಶಾಲೆ ಕುಲಹಳ್ಳಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಮತ್ತು ಶಿಸ್ತಿನಿಂದ ಕಾಣುವಂಥ (ಕೌರ) ಹೇರ್ ಕಟಿಂಗ್ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದಲ್ಲಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯ ಗಂಡು ಮಕ್ಕಳು 'ಹೆಬ್ಬುಲಿ'ಯಂತಹ ಇತರೆ ತರಹದ ಹೇರ್ ಕಟಿಂಗ್(ತಲೆಯ ಒಂದು ಬದಿಗೆ ಕೂದಲು ಬಿಟ್ಟು ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು) ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೆ ಹಾಗೂ ಚಟುವಟಿಕೆಗಳಿಗೆ ಹೆಚ್ಚು, ಮಹತ್ವ, ನೀಡದೇ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ ಎಂದು ಪತ್ರದಲ್ಲಿ ಮುಖ್ಯ ಶಿಕ್ಷಕರು ವಿವರಣೆ ನೀಡಿದ್ದಾರೆ.
ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು 'ಹೆಬ್ಬುಲಿ' ಹೇರ್ ಕಟಿಂಗ್ ಮಾಡಲು ನಿಮಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಲು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಹೆಬ್ಬುಲಿ' ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಒಂದು ಕಡೆ ಕೂದಲ್ ಕಟ್ ಮಾಡಿಸಿ, ಮತ್ತೊಂದು ಕಡೆ ಹಾಗೆಯೇ ಬಿಟ್ಟಿದ್ದರು. ಈಗ ಸ್ಟೈಲ್ ಅಭಿಮಾನಿಗಳ ಗಮನ ಸೆಳೆದಿತ್ತು. ನಟನ ನೆಚ್ಚನ ಅಭಿಮಾನಿಗಳು ಇದೇ ಮಾದರಿ ಅನುಸರಿಸಿದ್ದರು. ಆದರೆ ಈಗ ಶಾಲೆಯ ವಿದ್ಯಾರ್ಥಿಗಳ ಈ ಹೇರ್ ಸ್ಟೈಲ್ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ 2017ರಲ್ಲಿ ಬಿಡುಗಡೆಯಾಗಿತ್ತು. ರವಿಚಂದ್ರನ್, ಅಮಲಾ ಪೌಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಗೊಂಡಾಗ ಕಿಚ್ಚನ ಅಭಿಮಾನಿಗಳು ಇದೇ ಮಾದರಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಂಡು ಸಿನಿಮಾ ಸ್ವಾಗತಿಸಿದ್ದರು.
ಸಿನಿಮಾ ಬಿಡುಗಡೆಯಾಗಿ ಇಷ್ಟು ವರ್ಷಗಳು ಕಳೆದರೂ ಸಹ ಇನ್ನೂ ಸುದೀಪ್ ಹೇರ್ ಸ್ಟೈಲ್ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಶಾಲೆಯ ಮಕ್ಕಳು ಇದೇ ಮಾದರಿ ಹೇರ್ ಸ್ಟೈಲ್ ಮೂಲಕ ಶಾಲೆಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ಶಾಲೆಯ ಶಿಕ್ಷಕರು ಹೇರ್ ಕಟಿಂಗ್ ಅಂಗಡಿ ಮಾಲೀಕರಿಗೆ ಪತ್ರವನ್ನು ಬರೆದಿದ್ದಾರೆ.












Click it and Unblock the Notifications