Kannada: ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಮುದ್ರಿಸುವುದು ಕಡ್ಡಾಯ!
ಕನ್ನಡದ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಕೂಡ ಹೊರಡಿಸಿದೆ.
ರಾಜ್ಯದಲ್ಲಿ ತಯಾರಾಗುವ ಎಲ್ಲ ಕೈಗಾರಿಕಾ ಹಾಗೂ ಉತ್ಪನ್ನಗಳ ಮೇಲೆ ಹೆಸರು ಹಾಗೂ ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ಮುದ್ರಿಸಬೇಕು ಎಂದು ಸೂಚಿಸಿದೆ. ಇದನ್ನು ಎಲ್ಲ ಉತ್ಪನ್ನದಾರರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಖಡಕ್ ಸೂಚನೆ ನೀಡಿದೆ. ಸರ್ಕಾರದ ಈ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಸ್ವಾಗತಿಸಿದ್ದಾರೆ.

ʼನಮ್ಮ ಮೂರು ಪ್ರಮುಖ ಬೇಡಿಕೆಗಳ ಪೈಕಿ ಒಂದನ್ನು ರಾಜ್ಯ ಸರ್ಕಾರ ಈಡೇರಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಸುತ್ತೋಲೆಯ ಪ್ರಕಾರ ಇನ್ನು ಮುಂದೆ ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ವಿವರಗಳನ್ನು ಬರೆಯಬೇಕಾಗುತ್ತದೆ. ಮಹಾಸಂಘರ್ಷ ಯಾತ್ರೆಯ ಮೊದಲ ಬೇಡಿಕೆ ಈಗ ಈಡೇರಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳುʼ ಎಂದಿದ್ದಾರೆ.
ಈ ಸುತ್ತೋಲೆ ಕೇವಲ ಸುತ್ತೋಲೆಯಾಗಿ ಉಳಿಯಬಾರದು. ಕಾಲಮಿತಿಯೊಳಗೆ ಇದು ಜಾರಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಉತ್ಪನ್ನಗಳ ತಯಾರಕರಿಗೆ ಸುತ್ತೋಲೆಯ ಕುರಿತು ಮಾಹಿತಿ ನೀಡಿ, ಕನ್ನಡದಲ್ಲಿ ಮುದ್ರಿಸಬೇಕೆಂದು ತಾಕೀತು ಮಾಡಬೇಕು. ನಿಯಮ ತಪ್ಪಿದಲ್ಲಿ ಅಂತಹ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ "ಮಹಾಸಂಘರ್ಷ ಯಾತ್ರೆ"ಯ ಇನ್ನೆರಡು ಬೇಡಿಕೆಗಳನ್ನೂ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸುತ್ತೇನೆ. ಅಗತ್ಯ ಬಿದ್ದಲ್ಲಿ ಸೂಕ್ತ ಕಾಯ್ದೆಯನ್ನು ರೂಪಿಸಿ, ಕನ್ನಡಿಗರ ಕೈಗೆ ಉದ್ಯಮ ಮತ್ತು ಉದ್ಯೋಗಗಳು ದೊರೆಯುವಂತೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ನಾರಾಯಣಗೌಡ ಹೇಳಿದ್ದಾರೆ.
ಏಪ್ರಿಲ್‌ನಲ್ಲೂ ಮಹಾಸಂಘರ್ಷ ಯಾತ್ರೆ: ಫೆಬ್ರವರಿ 1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಾಸಂಘರ್ಷ ಯಾತ್ರೆಗೆ ಚಾಲನೆ ನೀಡಿತ್ತು. ಈ ಯಾತ್ರೆ ರಾಜ್ಯದ 31 ಜಿಲ್ಲೆಗಳಿಗೆ ಏಪ್ರಿಲ್ ತಿಂಗಳಿನಿಂದ ಹೋಗಲಿದೆ. ಯಾತ್ರೆಯ ಮೂರು ಪ್ರಮುಖ ಬೇಡಿಕೆಗಳೆಂದರೆ, ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲಿನ ಹೆಸರು, ವಿವರಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮುದ್ರಿಸುವುದು, ಈ ಉತ್ಪನ್ನಗಳ ಏಜೆನ್ಸಿಯನ್ನು ಕನ್ನಡಿಗರಿಗೆ ನೀಡುವುದು ಹಾಗೂ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬಗೆಯ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಎಂದು ಕರವೇ ಹೇಳಿದೆ.
ಕರ್ನಾಟಕದಲ್ಲಿ ಮಾರಾಟವಾಗುವ ಹಾಗೂ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರಹಗಳು ಕನ್ನಡದಲ್ಲಿಯೇ ಇರಬೇಕು. ಕನ್ನಡಿಗರಿಗೆ ತಾವು ಬಳಕೆ ಮಾಡುವ ವಸ್ತುಗಳ ಹೆಸರು, ಪ್ರಮಾಣವೇನು? ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ? ಎಂಬ ವಿಷಯಗಳು ಕಡ್ಡಾಯವಾಗಿ ಗೊತ್ತಾಗಬೇಕು ಎಂದು ಆಗ್ರಹಿಸಿದೆ.
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ಬ್ಯಾಂಕ್, ಫೈನಾನ್ಸ್, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ 100ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು. ಇತರೆ ಹುದ್ದೆಗಳಲ್ಲಿ ಶೇ 60ರಷ್ಟನ್ನು ಕನ್ನಡಿಗರಿಗೆ ಕೊಡಬೇಕು. ಈ ಎಲ್ಲ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕೂಡ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಹೇಳಿದೆ.












Click it and Unblock the Notifications