ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಕಲಬುರಗಿಯ ಸುಜಾತಾಗೆ ಎಸ್‌ಎಸ್‌ಎಲ್‌ಸಿಯಲ್ಲಿ ಬರೋಬ್ಬರಿ 529 ಅಂಕ
ಕಲಬುರಗಿ: ಬಡತನ, ಹಸಿವು ಮತ್ತು ದಿನನಿತ್ಯದ ಬದುಕಿನ ಹೋರಾಟಗಳ ನಡುವೆಯೂ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ್ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು. ಹೊಟ್ಟೆಪಾಡಿಗಾಗಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಈಕೆ, ಇತ್ತೀಚೆಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇಕಡಾ 84.64 ರಷ್ಟು, ಅಂದರೆ 625ಕ್ಕೆ 529 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ.
ಅಲೆಮಾರಿ ಸಮುದಾಯವಾದ ಗೊಲ್ಲರ ಜನಾಂಗಕ್ಕೆ ಸೇರಿದ ಸುಜಾತಾ ಅವರದ್ದು ಅನಕ್ಷರಸ್ಥ ಕುಟುಂಬ. ಕಡು ಬಡತನದ ಈ ಕುಟುಂಬಕ್ಕೆ ದಿನದ ತುತ್ತು ಅನ್ನಕ್ಕಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ಸುಜಾತಾ ಕೇವಲ ಭಿಕ್ಷಾಪಾತ್ರೆಗೆ ಸೀಮಿತವಾಗಿರಲಿಲ್ಲ; ಭಿಕ್ಷಾ ಪಾತ್ರೆ ಹಿಡಿದರೂ ಕೂಡ, ಆಕೆಯ ಮನಸ್ಸಿನಲ್ಲಿ ಶಿಕ್ಷಣ ಪಡೆಯಬೇಕೆಂಬ ಹಂಬಲವಿತ್ತು. ಅಲೆಮಾರಿ ಬದುಕಿನ ಕಷ್ಟಗಳ ನಡುವೆಯೂ, ಸರ್ಕಾರಿ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತು ಇಂದು ತನ್ನ ಅಂಕಗಳ ಮೂಲಕ ಬಡತನಕ್ಕೆ ಉತ್ತರ ನೀಡಿದ್ದಾಳೆ ಎಂದರೆ ತಪ್ಪಾಗಲಾರದು.

ಇಂದಿನ ದಿನಗಳಲ್ಲಿ ಮನೆಯಲ್ಲಿ ಸರಿಯಾಗಿ ಎಲ್ಲಾ ಸೌಲಭ್ಯಗಳಿದ್ದರೂ ಓದಲು ಹಿಂದೇಟು ಹಾಕುವ ವಿದ್ಯಾರ್ಥಿಗಳ ನಡುವೆ ಸುಜಾತಾ ಮಾಡಿದ ಈ ಸಾಧನೆ ಎಲ್ಲರಿಗೂ ಒಂದು ಮಾದರಿಯಾಗಿದೆ.
ಸುಜಾತಾಳ ಈ ಸಾಧನೆಯನ್ನು ಗುರುತಿಸಿದ ಸ್ಥಳೀಯರು ಆಕೆಯ ಮನೆಗೆ ತೆರಳಿ ಸತ್ಕರಿಸಿದ್ದಾರೆ. ಇಂತಹ ಅದ್ಭುತ ಪ್ರತಿಭೆ ಹಣದ ಕೊರತೆಯಿಂದ ನಲುಗಬಾರದು, "ಈಕೆಯ ಭವಿಷ್ಯಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು" ಎಂಬ ಉದ್ದೇಶದೊಂದಿಗೆ ಆಕೆಯ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ. ಅಲೆಮಾರಿ ಜನಾಂಗದಲ್ಲಿ ಅರಳಿದ ಈ ಅಪರೂಪದ ಪ್ರತಿಭೆ ಕೇವಲ ಅಂಕಗಳನ್ನು ಗಳಿಸಿಲ್ಲ, ಬದಲಿಗೆ ಸಾವಿರಾರು ಬಡ ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ದೀಪವಾಗಿದ್ದಾಳೆ.
ಭಿಕ್ಷಾಟನೆಯೇ ಜೀವನಾಧಾರವಾಗಿರುವ ಇಂತಹ ದುರ್ಬಲ ವರ್ಗದ ಮಕ್ಕಳು ಶೈಕ್ಷಣಿಕ ಮುಖ್ಯವಾಹಿನಿಗೆ ಬರುವುದು ಅತ್ಯಂತ ವಿರಳ. ಊರೂರು ಅಲೆಯುವ ಈ ಸಮುದಾಯದ ಮಕ್ಕಳಿಗೆ ಶಾಲೆ, ಪುಸ್ತಕ ಎಂಬುದು ಮರೀಚಿಕೆಯೇ ಸರಿ. ಆದರೂ ಶಿಕ್ಷಕರ ಪ್ರೋತ್ಸಾಹ ಹಾಗೂ ತನ್ನ ಸ್ವಂತ ಪರಿಶ್ರಮದಿಂದ ಸುಜಾತಾ ಈ ಮೈಲಿಗಲ್ಲು ಸಾಧಿಸಿದ್ದಾಳೆ.












Click it and Unblock the Notifications