Karnataka Next CM: ಕನಕಪುರದ ಬಂಡೆಗೆ ಒಲಿಯುತ್ತಾ ಸಿಎಂ ಪಟ್ಟ? ಕಾಲಜ್ಞಾನಿ ಗುರೂಜಿ ನುಡಿದ ಭವಿಷ್ಯವೇನು?
ಬೆಂಗಳೂರು ಮೇ 15: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ನಿವಾಸಕ್ಕೆ ಕಾಲಜ್ಞಾನಿ ಗುರೂಜಿ ಆಗಮಿಸಿ ಶುಭ ಹಾರೈಸಿದ್ದಾರೆ.
ಸುಮಾರು ವರ್ಷಗಳಿಂದ ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಹೇಳುತ್ತಿದ್ದ ಕಾಲಜ್ಞಾನಿ ಗುರೂಜಿ ವಿಜಯ್ ರಾಜ್ ಇಂದೂ ಕೂಡ ಡಿಕೆಶಿ ಅವರ ಭವಿಷ್ಯವನ್ನು ನುಡಿದಿದ್ದಾರೆ. ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಗುರೂಜಿ ಅವರು, ಕೆಲ ಸಲಹೆಯನ್ನು ನೀಡಿದ್ದಾರೆ. ಇಂದು ಡಿಕೆ ಶಿವಕುಮಾರ್‌ಗೆ ಬುಧ ಮತ್ತು ಆದಿತ್ಯ ಪಂಚಮಯೋಗವಿದೆ ಎಂದು ಗುರೂಜಿ ತಿಳಿಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಹಾರ ಹಾಕಿ ಆಶೀರ್ವಾದ ಮಾಡಿ ಅಲ್ಲಿಂದ ತೆರಳಿದ್ದಾರೆ.

ನಿಮ್ಮ ಜಾತಕದಲ್ಲಿ ಗುರುವಾರದ ದಿನ ತುಂಬಾ ಒಳ್ಳೆಯ ದಿನವಾಗಿದೆ. ಅಂದೇ ಕೆಲಸ ಆರಂಭಿಸಿ ಎಂದು ಕೂಡ ಅವರು ಸಲಹೆಯನ್ನು ನೀಡಿದ್ದಾರೆ. ಈ ಹಿನ್ನಲೆ ಗುರುವಾರದಂದು ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಫಿಕ್ಸ್ ಆಗುತ್ತಾ..? ಯಾರು ಸಿಎಂ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನೇನು ಸಿಎಂ ಘೋಷಣೆಯಾದ ಬಳಿಕ ಕಾಂಗ್ರೆಸ್ ಆಡಳಿತ ಶುರುವಾಗಲಿದೆ. ಆದರೆ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಆಯ್ಕೆ ವಿಚಾರ ಇನ್ನೂ ಚರ್ಚೆಯಲ್ಲಿದೆ. ಸಿಎಂ ರೇಸ್‌ನಲ್ಲಿ ಕಾಮಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಂಚುಣಿಯಲ್ಲಿದ್ದಾರೆ. ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೈಕಮಾಂಡ್ ಅಂಗಳದಲ್ಲಿರುವ ಸಿಎಂ ಚಂಡು ಯಾರ ಬಳಿಗೆ ಬಂದು ಬೀಳಲಿದೆ ಎನ್ನುವ ಚರ್ಚೆಗಳು ನಡೆದಿವೆ.
ಇತ್ತ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಬಲಿಗರು ಹಾಗೂ ಅಭಿಮಾನಿಗಳು ರಾಜ್ಯದಲ್ಲಿ ತಮ್ಮ ನೆಚ್ಚಿನ ನಾಯಕರೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ರಾಜ್ಯದ ಹಲವೆಡೆ ಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಎನ್ನುವ ಪೋಸ್ಟರ್ ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜೊತೆಗೆ ಭಾನುವಾರ ಕಾಂಗ್ರೆಸ್ ಶಾಸಕರ ಸಭೆಯಲ್ಲಿ 136 ಶಾಸಕರು ಕೂಡ ಸಿಎಂ ಯಾರಾಗಬೇಕು ಎನ್ನುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಎಲ್ಲರ ಅಭಿಪ್ರಾದ ಚಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿದ್ದು ಯಾರತ್ತ ಬಂದು ಬೀಳಲಿದೆ ಎನ್ನುವ ಕುತೂಹಲ ಮೂಡಿದೆ.
ಬಲ್ಲ ಮೂಲಗಳ ಪ್ರಕಾರ ಮೇ 18ರಂದು ಪ್ರಮಾಣ ವಚನ ಸ್ವೀಕಾರ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇಂದು ಡಿಕೆ ಶಿವಕುಮಾರ್ ಪಕ್ಷದ ಶಾಸಕರನ್ನು ಭೇಟಿ ಮಾಡಲು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ದೆಹಲಿ ಹೋಗಬೇಕು ಅನ್ನೋದು ಇದೆ. ಆದರೆ ನಾನು ಹೋಗುವುದಿಲ್ಲ. ಯಾಕೆಂದರೆ ಇವತ್ತು ನನ್ನ ಹುಟ್ಟಿದಹಬ್ಬ ಹೀಗಾಗಿ ಪೂಜೆ, ನಂಬಿಕೆ, ಅಜ್ಜರ ಭೇಟಿ ಎಲ್ಲವೂ ಇದೆ. ಅದನ್ನು ನಾನು ಮಾಡಲೇಬೇಕು. ಹೀಗಾಗಿ ಇಂದು ನಾನು ಎಲ್ಲಿಗೂ ಹೋಗುವುದಿಲ್ಲ' ಎಂದರು.
'ಹೈಕಮಾಂಡ್ಗೆ ಸಿಎಂ ವಿಚಾರ ಬಿಟ್ಟಿದ್ದೇವೆ. ಶಾಸಕರೆಲ್ಲರೂ ಅಭಿಪ್ರಾಯ ಕೊಟ್ಟಿದ್ದಾರೆ. ರಾಜ್ಯದ ಜನತೆ ನನ್ನ ಮೇಲೆ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ದೆಹಲಿಗೆ ಹೋಗುತ್ತಿಲ್ಲ. ಹಲವಾರು ಪೂಜಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ನಾನು ಎಲ್ಲಿಗೂ ಹೋಗುತ್ತಿಲ್ಲ' ಎಂದರು.

ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು ಇಂದು ಸಂಜೆ ಡಿಕೆ ಶಿವಕುಮಾರ್ ಕೂಡ ದೆಹಲಿಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಏನಾಗುತ್ತದೆ? ಹೈಕಮಾಂಡ್ ತೀರ್ಮಾನ ಏನು ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications