ಜೆಎಸ್‌ಎಸ್ ಶಾಲೆಗೆ ಪ್ರವೇಶ; ಅರ್ಹತೆ, ವಿವರಗಳು
ಬೆಂಗಳೂರು, ಏಪ್ರಿಲ್ 29: ಶ್ರೀ ಸುತ್ತೂರು ಕ್ಷೇತ್ರದ ಜೆಎಸ್‌ಎಸ್ ಶಾಲೆಯಲ್ಲಿ 2024-25ನೇ ಸಾಲಿನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಪ್ರವೇಶ ಪರೀಕ್ಷೆ, ಸಂದರ್ಶನದ ಮೂಲಕ ಪ್ರವೇಶ ನೀಡಲಾಗುತ್ತದೆ.
ಕನ್ನಡ ಮಾಧ್ಯಮ 1 ರಿಂದ 8 ಹಾಗೂ ಆಂಗ್ಲ ಮಾಧ್ಯಮ 1, 5 ಹಾಗೂ 8ನೇ ತರಗತಿಗೆ ಪ್ರವೇಶವಿದೆ. ಕನ್ನಡ ಮಾಧ್ಯಮದಲ್ಲಿ 9 ಮತ್ತು 10ನೇ ತರಗತಿ, ಆಂಗ್ಲ ಮಾಧ್ಯಮದಲ್ಲಿ 2, 3, 4, 6, 7, 9 ಹಾಗೂ 10ನೇ ತರಗತಿಗೆ ಪ್ರವೇಶವಿಲ್ಲ.

ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ನೀಡಲಾಗುವುದು. ವಸತಿ ನಿಲಯದಲ್ಲಿ ದಾಖಲಾಗುವ ಮಕ್ಕಳನ್ನು ಪೋಷಕರು ತಿಂಗಳಿಗೊಮ್ಮೆ ಮಾತ್ರ ಶನಿವಾರ ಮಧ್ಯಾಹ್ನ 12 ರಿಂದ ಸಂಜೆ 5ರ ವರೆಗೆ ಮತ್ತು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4.30 ರವರೆಗೆ ಭೇಟಿ ಮಾಡಬಹುದು.
ಮಕ್ಕಳನ್ನು ದೀರ್ಘಾವಧಿ ರಜೆಯಲ್ಲಿ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ, ಪೂರ್ವಾನುಮತಿ ಪಡೆದು ಊರಿಗೆ ಕರೆದುಕೊಂಡು ಹೋಗಬಹುದು. ವಿದ್ಯಾರ್ಥಿಗಳನ್ನು ತಂದೆ, ತಾಯಿ ಹಾಗೂ ಪೋಷಕರ ಜೊತೆಗೆ ಮಾತ್ರ ಕಳುಹಿಸಿಕೊಡಲಾಗುವುದು. ಮಕ್ಕಳನ್ನು ಭೇಟಿ ಮಾಡಿದ ನಂತರ ಪೋಷಕರು ಶಾಲಾ ಆವರಣದಲ್ಲಿ ಉಳಿದುಕೊಳ್ಳಲು ಅವಕಾಶವಿರುವುದಿಲ್ಲ. ಶ್ರೀಮಠದಲ್ಲಿ ವಾಸ್ತವ್ಯ ಹಾಗೂ ಪ್ರಸಾದಕ್ಕೆ ವ್ಯವಸ್ಥೆ ಇರುತ್ತದೆ. ತಂದೆ/ ತಾಯಿ/ ಪೋಷಕರು ವಿದ್ಯಾರ್ಥಿಗಳಿಗೆ ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ನೀಡಬಾರದು.
ಮಕ್ಕಳಿಗೆ ಅನಾರೋಗ್ಯವಾದಲ್ಲಿ ಅಥವಾ ಮತ್ತೇನಾದರೂ ಸಮಸ್ಯೆಗಳು ಉಂಟಾದಲ್ಲಿ ಪತ್ರ/ ದೂರವಾಣಿ ಮೂಲಕ ಮನೆಯವರಿಗೆ ಕೂಡಲೇ ತಿಳಿಸಲಾಗುವುದು. ಸಂಸ್ಥೆಯ ಶಿಸ್ತಿನ ದೃಷ್ಟಿಯಿಂದ ನಿಯಮಗಳನ್ನು ಎಲ್ಲರೂ ಪಾಲಿಸಬೇಕಾದುದು ಅವಶ್ಯಕ. ಯಾವುದೇ ಕಾರಣಕ್ಕೂ ನಿಯಮಗಳನ್ನು ಸಡಿಲಗೊಳಿಸಲಾಗುವುದಿಲ್ಲ. ಪ್ರವೇಶದ ಸಂದರ್ಭದಲ್ಲಿ ಮೇಲ್ಕಂಡ ನಿಯಮಾವಳಿಗಳನ್ನು ಅನುಸರಿಸುವ ಬಗ್ಗೆ ತಂದೆ, ತಾಯಿ/ ಪೋಷಕರು ಸೂಕ್ತ ಮುಚ್ಚಳಿಕೆಯನ್ನು ನೀಡಬೇಕು.
ಲಿಖಿತ ಪರೀಕ್ಷೆ ವಿವರ: 3 ರಿಂದ 8ನೇ ತರಗತಿಗೆ 17/5/2024 ರಂದು ಬೆಳಗ್ಗೆ 10 ರಿಂದ ಲಿಖಿತ ಪರೀಕ್ಷೆ, 18/5/2024ರ ಬೆಳಗ್ಗೆ 10 ರಿಂದ ಸಂದರ್ಶನ ನಡೆಸಲಾಗುತ್ತದೆ. ಫಲಿತಾಂಶವನ್ನು 22/5/2024ರಂದು ಪ್ರಕಟಿಸಲಾಗುತ್ತದೆ. ದಾಖಲಾತಿಯೂ 29/5/2024 ರಿಂದ ಆರಂಭವಾಗುತ್ತದೆ. 1 ಮತ್ತು 2ನೇ ತರಗತಿಗೆ 17/5/2024ರಂದು ಮೌಖಿಕ ಸಂದರ್ಶನ ನಡೆಸಿ, ಆಯ್ಕೆಯಾದವರನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ.
ಜೆಎಸ್‌ಎಸ್ ವಸತಿ ಶಾಲೆ ಆರ್ಥಿಕ ಸಂಕಷ್ಟದಿಂದ ಅಥವಾ ಕೌಟುಂಬಿಕ ಸಮಸ್ಯೆಗಳಿಂದಾಗಿ ಪ್ರಾಥಮಿಕ/ ಪ್ರೌಢ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ಶಿಕ್ಷಣ, ಊಟ, ವಸತಿಗಳ ಸೌಲಭ್ಯವನ್ನು ಶ್ರೀ ಕ್ಷೇತ್ರದಲ್ಲಿ ಸುಮಾರು 65 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಕಲ್ಪಿಸಲಾಗಿದೆ.
ಬಾಲಕರಿಗಾಗಿ ಬಸವೇಶ್ವರ ವಿದ್ಯಾರ್ಥಿ ನಿಲಯ ಹಾಗೂ ಬಾಲಕಿಯರಿಗಾಗಿ ಅಕ್ಕಮಹಾದೇವಿ ವಿದ್ಯಾರ್ಥಿನಿಲಯಗಳ ವ್ಯವಸ್ಥೆ ಇದೆ. ಇದಲ್ಲದೆ ಸಂಸ್ಕೃತ, ಸಂಗೀತ, ನೃತ್ಯ, ಚಿತ್ರಕಲೆ, ಪರಿಸರಪ್ರಜ್ಞೆ, ಜೀವನಮೌಲ್ಯಗಳು, ವ್ಯಕ್ತಿತ್ವವಿಕಾಸ, ಯೋಗ, ಮಲ್ಲಕಂಬ, ದೇಸಿ ಆಟಗಳು, ಕ್ರೀಡೆಗಳು, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಬ್ಯಾಂಡ್, ಕೃಷಿ, ಕಂಪ್ಯೂಟರ್ ಶಿಕ್ಷಣ ಹಾಗೂ ವೃತ್ತಿಪರ ಕರಕುಶಲ ಕಲೆ ತರಬೇತಿ ಮೊದಲಾದ ಹಲವಾರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಶಿಕ್ಷಣ ಕ್ರಮದಲ್ಲಿ ಒತ್ತು ನೀಡಲಾಗುತ್ತಿದೆ. ಪ್ರತಿ ವರ್ಷವೂ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ.
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯಲು ಅವಕಾಶವಿದೆ. ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಇದೆ. ವಿಶಾಲವಾದ ಕ್ರೀಡಾಂಗಣ ಮತ್ತು ಮಲ್ಟಿಜಿಮ್‌ಗಳಿವೆ. ಆರೋಗ್ಯ ತಪಾಸಣೆಗಾಗಿ ಜೆಎಸ್‌ಎಸ್ ಆಸ್ಪತ್ರೆ, ಜೆಎಸ್‌ಎಸ್ ದಂತ ಚಿಕಿತ್ಸಾಲಯ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಗಳಿವೆ. ಜೆಎಸ್‌ಎಸ್ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಶುಕ್ರೂಷಕರ ನಿರಂತರ ಸೇವೆ ಲಭ್ಯವಿದೆ.
ಸಣ್ಣಪುಟ್ಟ ಅನಾರೋಗ್ಯಗಳಿಗೆ ಅಗತ್ಯವಾದ ಔಷಧೋಪಚಾರವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪೋಷಕರು ಭರಿಸಬೇಕು. ಶಾಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಯಲು ಸಭಾಂಗಣವಿದೆ. ಬೌದ್ಧಿಕ ವಿಕಾಸಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರೊಡನೆ ಆಗಿಂದಾಗ್ಗೆ ಸಂವಾದ ಕಾರ್ಯಕ್ರಮಗಳಿರುತ್ತವೆ.
ಸೂಚನೆಗಳು: 2024-25ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದ ಸೂಚನೆಗಳು ಹೀಗಿವೆ. ಪ್ರವೇಶ ಬಯಸುವ ತರಗತಿ ಮತ್ತು ಮಾಧ್ಯಮವನ್ನು ಅರ್ಜಿಯಲ್ಲಿ ಸೂಚಿಸಿರುವ ಸ್ಥಳದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿ ಭರ್ತಿ ಮಾಡುವಾಗ ವಿಳಾಸವನ್ನು ಸಂಪೂರ್ಣವಾಗಿ ಒದಗಿಸಬೇಕು (ಮನೆ ಸಂಖ್ಯೆ, ಬೀದಿ-ರಸ್ತೆ, ಮೊಹಲ್ಲ, ಪಟ್ಟಣ/ ಗ್ರಾಮ, ತಾಲ್ಲೂಕು, ಜಿಲ್ಲೆ ಇತ್ಯಾದಿ), ಸ್ಥಿರ ದೂರವಾಣಿ/ ಮೊಬೈಲ್, ಇ-ಮೇಲ್ ಇತ್ಯಾದಿ ವಿವರಗಳನ್ನು ನಮೂದಿಸಬೇಕು.
ಅರ್ಜಿ ಸಲ್ಲಿಸುವಾಗ ಕೆಳಗೆ ನಮೂದಿಸಿರುವ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸಂದರ್ಶನಕ್ಕೆ ಬರುವಾಗ ಮೂಲ ದಾಖಲೆಗಳನ್ನು ತರಬೇಕು.
* ಜನ್ಮ ದಿನಾಂಕ ದೃಢೀಕರಣ ಪತ್ರ (1ನೇ ತರಗತಿಗೆ ಮಾತ್ರ)
* ಹಿಂದಿನ ತರಗತಿಯ ಅಂಕಪಟ್ಟಿ
* ಜಾತಿ ದೃಢೀಕರಣ ಪತ್ರ
* ವಾರ್ಷಿಕ ವರಮಾನ ಪತ್ರ
* ವೈದ್ಯಕೀಯ ಪ್ರಮಾಣಪತ್ರ
* ವಿದ್ಯಾರ್ಥಿ, ತಂದೆ ಮತ್ತು ತಾಯಿಯ/ಪೋಷಕರ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿ
* ವಿದ್ಯಾರ್ಥಿಗೆ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಮೊದಲ ಪುಟದ ಜೆರಾಕ್ಸ್ ಪ್ರತಿ
* ಪಡಿತರ ಚೀಟಿ (ರೇಷನ್ ಕಾರ್ಡ್)
ಪ್ರವೇಶ ಅರ್ಜಿಯ ನಮೂನೆ ವೆಬ್ ಸೈಟ್ ಗಳಲ್ಲಿಯೂ ದೊರೆಯುತ್ತದೆ. ಆಸಕ್ತರು www.jssschoolsuttur.org ಮತ್ತು www.jssonline.org ಭೇಟಿ ನೀಡಬಹುದು.












Click it and Unblock the Notifications