Jowar Price: ಬಿಳಿ ಜೋಳ ಬೆಲೆ ದಿಢೀರ್ ಕುಸಿತ: ರೈತರಿಗೆ ನಿರಾಸೆ
ಬೆಂಗಳೂರು, ಮಾರ್ಚ್ 06: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಈ ಬಾರಿ ಜೋಳ ಬೆಳೆ ಕಡಿಮೆಯಾಗುವ ಜತೆಗೆ ಪ್ರತಿ ಕ್ವಿಂಟಾಲ್ ಜೋಳದ ಬೆಲೆ ಸುಮಾರು 8000 ವರಗೆ ಹೆಚ್ಚಾಗಬಹುದು ಎನ್ನಲಾಗಿದೆ. ಆದರೆ ಜೋಳದ ಬೆಲೆ ನಿರೀಕ್ಷೆಯಷ್ಟು ಸಿಗದ ಕಾರಣ ರೈತರ ನಿರೀಕ್ಷೆ ಹುಸಿಯಾಗಿದೆ.
ಮಾರುಕಟ್ಟೆಯಲ್ಲಿ ಬಿಳಿ ಜೋಳದ ದರ ದಿಢೀರ್ ಇಳಿಕೆಯಾಗಿದೆ. ಇದರಿಂದ ಲಾಭದ ಆಶಯದಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಹಿಂಗಾರು ಹಂಗಾಮಿನ ಆರಂಭದಲ್ಲಿ ಬಿಳಿ ಜೋಳ ಕ್ವಿಂಟಾಲ್ 8000 ರೂಪಾಯಿ ಇತ್ತು. ಇದೀಗ ಅದರ ಬೆಲೆ 3,500 ರೂಪಾಯಿಗೆ ಏಕಾಎಕಿ ಕುಸಿತಗೊಂಡಿದೆ ಎಂದು 'ವಿಕ' ವರದಿ ಮಾಡಿದೆ.

ಕೈಕೊಟ್ಟ ಹಿಂಗಾರು: ಇಳುವರಿ ಕುಂಠಿತ
ಮುಂಗಾರು ಮಳೆ ಈ ಬಾರಿ ನಿರೀಕ್ಷೆಯಷ್ಟು ಬರಲಿಲ್ಲ. ಆದರೆ ಹಿಂಗಾರು ಮಳೆ ಆಧರಿಸಿ, ಅಲ್ಲಿ ಇಲ್ಲಿ ನೀರು ಬಳಸಿ ದಾವಣಗೆರೆಯ ಹೊನ್ನಾಳಿ, ನ್ಯಾಮತಿ ರೈತರು ಜೋಳ ಬೆಳೆದಿದ್ದರು. ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಹಿಂಗಾರು ಮಳೆ ನಿರೀಕ್ಷೆಯಷ್ಟು ಬರಲಿಲ್ಲ.
ಬಿತ್ತನೆ ವೇಳೆ ನೆಲ ಹಸಿ ಇದ್ದರೆ ಸಾಕು ನಂತರ ತೇವ-ತಂಪು ವಾತಾವರಣಕ್ಕೆ ಜೋಳ ಬೆಳೆಯುತ್ತದೆ. ಆದರೆ ಈ ಬಾರಿ ಬೆಳಗ್ಗೆ ಇಬ್ಬನಿ ಸಹ ಸರಿಯಾಗಿ ಬೀಳದ ಕಾರಣ ಜೋಳದ ಇಳವರಿ ಸಮರ್ಪಕವಾಗಿ ಬಂದಿಲ್ಲ. ಈ ಎಲ್ಲ ಕಾರಣಗಳು ರೈತರಿಗೆ ಹೆಚ್ಚು ಲಾಭ ಕನಸನ್ನು ನುಚ್ಚು ನೂರು ಮಾಡಿವೆ.
ಜೋಳದ ಮಾರುಕಟ್ಟೆ ದರ ವಿವರ
ದಿಢೀರ್ ಕುಸಿತಗೊಂಡಿರುವ ಬಿಳಿ ಜೋಳದ (ಬಳ್ಳಾರಿ-5 ತಳಿ) ಇಂದಿನ ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್‌ಗೆ 2,200 ರೂಪಾಯಿಯಷ್ಟಿದೆ. ಇದರಲ್ಲಿ ತುಸು ಉತ್ತಮ ಗುಣಮಟ್ಟದ ಬಿಳಿ ಜೋಳದ ಬೆಲೆ 4,000 ರೂಪಾಯಿ ಇದೆ. ಆದರೆ ರೈತರಿಂದ ಖರೀದಿಯೆ ಆಗುತ್ತಿಲ್ಲ. ಜೋಳ ಖರೀದಿಸುವವರೂ ಇಲ್ಲದಾಗಿದೆ ಎಂದು ಜಿಲ್ಲೆಯ ವ್ಯಾಪ್ತಿಯ ರೈತರೊಬ್ಬರು ಅಳಲು ತೊಂಡಿಕೊಂಡಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಆಗಿದ್ದೆಷ್ಟು?
ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 6,123 ಹೆಕ್ಟೇರ್‌ನಲ್ಲಿ ಬಿಳಿ ಜೋಳ ಬಿತ್ತನೆ ಮಾಡುವ ಗುರಿ ಇತ್ತು. ಆದರೆ ಹಿಂಗಾರು ಮಳೆ ಕೊರತೆಯಿಂದ ಕೇವಲ 3,855 ಹೆಕ್ಟೇರ್ ನಲ್ಲಿ ಜೋಳ ಬೆಳೆಯಲಾಯಿತು. ಆದರೆ ಇದು ಸಹ ಉತ್ತಮವಾಗಿ ಬೆಳೆಯಲು ಬೇಕಾದ ವಾತಾವರಣ ನಿರ್ಮಾಣವಾಗಲಿಲ್ಲ.
ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು (2,200) ಜೋಳ ಬಿತ್ತನೆ ಆಗಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಕಡಿಮೆ (1,475) ಜೋಳ ಬಿತ್ತಲಾಗಿದೆ. ಇನ್ನೂ ಹರಿಹರ 100, ಚನ್ನಗಿರಿ ತಾಲೂಕಿನಲ್ಲಿ ಕೇವಲ 80 ಹೆಕ್ಟೇರ್ ಬಿತ್ತನೆ ಆಗಿದೆ ಎಂದು ವರದಿ ಆಗಿದೆ. ಇನ್ನು ಕೆಲವು ಊರುಗಳಲ್ಲಿ ಮಳೆ ಕೊರೆಯಿಂದ ರೈತರು ಜೋಳ ಬಿತ್ತುವ ಸಾಹಸ ಮಾಡಿಲ್ಲ.
ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಆಗದ ಬರಗಾಲ ಉಂಟಾಗಿದೆ. ಮಳೆ ಕೊರತೆಯಿಂದ ಒಣಗಿದ ಬೆಳೆಯನ್ನು ರೈತರು ಹರಗಿಸಿದ್ದರು. ಅಲ್ಲಿ ಇಲ್ಲಿ ಬೆಳೆದ ಮಕ್ಕೆಜೋಳ ಹಾಗೂ ಇನ್ನಿತರ ಬೆಳೆಗಳ ಇಳುವರಿಯು ಅಷ್ಟಾಗಿ ಬರಲಿಲ್ಲ. ಆರ್ಥಿಕ ಸಂಕಷ್ಟಕ್ಕೆ ತುತ್ತಾದ ರೈತ ಹಿಂಗಾರು ಹಂಗಾಮಿನ ಬೆಳೆಯಾದ ಜೋಳ ನೆಚ್ಚಿಕೊಂಡಿದ್ದ. ಉತ್ತಮ ಲಾಭ ಸಿಗುವ ವಿಶ್ವಾಸದಲ್ಲಿದ್ದ. ಆದರೆ ಈ ಬಾರಿಯು ರೈತರಿಗೆ ನಿರೀಕ್ಷಿತ ಲಾಭ ಸಿಗುವ ವಾತಾವರಣವೇ ಇಲ್ಲದಾಗಿದೆ.
ಹಿಂಗಾರು ಮಳೆಗೂ ಮುನ್ನ ರಾಜ್ಯದಲ್ಲಿ ಜೋಳ ಬೆಳೆಯುವ ರೈತರಿಗೆ ಈ ವರ್ಷ ಬಂಪರ್ ಆದಾಯ ಬರಲಿದೆ ಅಂತಲೂ ಊಹಿಸಲಾಗಿತ್ತು. ಆದರೆ ಅದೆಲ್ಲವು ದಿಢೀರ್ ಬೆಲೆ ಕುಸಿತದಿಂದ ತಳೆಕೆಳಗಾಗಿದೆ.
ಬೆಲೆ ಕುಸಿದರೂ ಸಹಿತ ಸಾಮಾನ್ಯ ಎಂಬಂತಹ ಬೆಲೆ ಬಿಳಿ ಜೋಳಕ್ಕೆ ಸಿಗಲಿದೆ. ಆದರೆ ಇಂತಹ ಬರಗಾಲದಲ್ಲಿ ಕಡಿಮೆ ಉತ್ಪಾದನೆಯ ಸಮಯದಲ್ಲಿ ಸಿಗಬೇಕಾದಷ್ಟು ನಿರೀಕ್ಷಿತ ಬೆಲೆ ಇಲ್ಲ ಎಂಬ ಕೊರಗು ಕಾಡುತ್ತಿದೆ.












Click it and Unblock the Notifications